“ಬಿ.ವೈ.ವಿಜಯೇಂದ್ರ ಅಧಿಕಾರ ಸ್ವೀಕಾರ”- ಧಾರವಾಡ ಜಿಲ್ಲೆಯ ಬಹುತೇಕ ಬಿಜೆಪಿ ನಾಯಕರು ಗೈರು…
1 min readಧಾರವಾಡ: ರಾಜ್ಯದಲ್ಲಿ ಹಲವು ತಿಂಗಳಗಳ ನಂತರ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ ನಂತರವೂ ಬಿಜೆಪಿಯಲ್ಲಿ ಆಂತರಿಕ ಬೇಗುದಿ ಹಾಗೇ ಇದೆ ಎನ್ನುವ ವಾತಾವರಣ ಕಂಡು ಬಂದಿದೆ.
ರಾಜಧಾನಿಯಲ್ಲಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡುವ ವೇಳೆಯಲ್ಲಿ ಧಾರವಾಡ ಜಿಲ್ಲೆಯ ಬಹುತೇಕ ನಾಯಕರು ಗೈರಾಗಿದ್ದು, ಎಲ್ಲವೂ ಸರಿಯಾಗಿಲ್ಲ ಎಂಬುದು ಕಂಡು ಬರತೊಡಗಿದೆ.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಅಮೃತ ದೇಸಾಯಿ, ಎಸ್.ಐ.ಚಿಕ್ಕನಗೌಡರ ಗೈರಾಗಿದ್ದು, ಭಾರತೀಯ ಜನತಾ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಂಡು ಬರುತ್ತಿದೆ.
ಈ ಹಿಂದಿನಿಂದಲೂ ಜನೇವರಿವರೆಗೆ ಯಾವುದೇ ರಾಜಕೀಯ ಸಭೆ, ಸಮಾರಂಭದಲ್ಲಿ ಭಾಗವಹಿಸುವುದಿಲ್ಲವೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದರು. ಇದಾದ ಮೇಲೆ ಜಿಲ್ಲೆಯಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ ಎಂದು ಪ್ರದೀಪ ಶೆಟ್ಟರ್ ಹೇಳಿದ್ದರು.
ಜಿಲ್ಲೆಯ ಪ್ರಮುಖರು ಇಲ್ಲಿನ ಸಮಸ್ಯೆಯನ್ನ ಬಗೆಹರಿಸುವಂತೆಯೂ ಕೇಳಿಕೊಂಡಿದ್ದರು. ಆದರೆ, ಯಾವುದೇ ಥರದ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರದ ವೇಳೆಯಲ್ಲಿ ಬಹುತೇಕರು ಗೈರಾಗಿದ್ದಾರೆಂದು ಹೇಳಲಾಗುತ್ತಿದೆ.