ನೀರಲ್ಲಿ ತೇಲಿ ಹೋದ ಹಾರೋಬೆಳವಡಿಯ ಯುವಕ ಮೊರಬದ ಬಳಿ ಶವವಾಗಿ ಪತ್ತೆ
1 min readಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದ ಬಳಿ ಕಡಲೆ ಹೊಲಕ್ಕೆ ಹುಳು ಆಗಿದೆಯಂದು ಎಣ್ಣಿ ಹೊಡೆದು ಕೈಕಾಲು ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ನೀರಿನಲ್ಲಿ ತೇಲಿ ಹೋಗಿದ್ದ ಯುವಕನ ಶವ ಮೊರಬ-ತಲೆಮೊರಬದ ನಡುವೆ ಕಾಲುವೆಯಲ್ಲಿ ಸಿಕ್ಕಿದೆ.
ಹತ್ತೋಂಬತ್ತು ವಯಸ್ಸಿನ ವೀರೇಶ ಚಂದ್ರಯ್ಯ ಸಿದ್ಧಗಿರಿಮಠ ಎಂಬಾತನೇ ನೀರಿನಲ್ಲಿ ತೇಲಿ ಹೋಗಿದ್ದ. ಯುವಕನಿಗಾಗಿ ಗ್ರಾಮಸ್ಥರು ಹುಡುಕಾಟ ಆರಂಭಿಸಿ, ನವಲಗುಂದ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಎರಡು ದಿನದಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ವೀರೇಶನ ಶವ ಪತ್ತೆಯಾಗಿದೆ.
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಯುವಕ ವೀರೇಶ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಬರುವಾಗ ಕಾಲುವೆಯಲ್ಲಿ ಸ್ವಚ್ಚವಾಗಲು ಕೆಳಗೆ ಇಳಿದಿದ್ದ. ಆಯತಪ್ಪಿ ಕೆಳಗಡೆ ಬಿದ್ದಾಗ, ಈಜು ಬಾರದೇ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದನ್ನ ಗ್ರಾಮಸ್ಥರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯುವಕ ಇಳಿದ ಜಾಗದಲ್ಲಿ ಹುಡುಕಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಲುವೆಯ ಸುತ್ತಲೂ ಗ್ರಾಮಸ್ಥರು ತಡಕಾಟ ನಡೆಸಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಹುಡುಕಾಟ ಆರಂಭಿಸಿದ್ದ ನವಲಗುಂದ ಠಾಣೆ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಹಾಗೂ ಪಿಎಸೈ ಜಯಪಾಲ ಪಾಟೀಲರಿಗೆ ಇಂದು ಶವ ದೊರಕಿದೆ.
ವೀರೇಶನ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಪೊಲೀಸರು ಜರುಗಿಸಿದ್ದಾರೆ.