11 ವರ್ಷದ ನೆನಪು.. ಅಂದಿನ ಬಿಇಓ ಇಂದೂ ಅಲ್ಲೇ ಇರೋದು…!
1 min readಧಾರವಾಡ: ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ 11 ವರ್ಷಗಳ ಸಂಭ್ರಮ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಸ್ತಿತ್ವಕ್ಕೆ ಬಂದು 02.04.2021 ಕ್ಕೆ ಬರೋಬ್ಬರಿ 11 ವಸಂತಗಳು ತುಂಬಿವೆ.
ಶಿಕ್ಷಣ ಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ದೇಶದ ಅಭಿವೃದ್ಧಿ ಆಗಬೇಕೆಂದರೆ ಶಿಕ್ಷಣ ಬಹುಮುಖ್ಯ ಜನರು ಶಿಕ್ಷಿತರಾದರೆ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ.
ಈ ಮಹತ್ಕಾರ್ಯಕ್ಕೆ ಶಾಲಾ-ಕಾಲೇಜುಗಳು ಶಿಕ್ಷಣ ಸಂಸ್ಥೆಗಳು ಆಧಾರಸ್ತಂಭಗಳು ಇದ್ದಂತೆ. ಎಲ್ಲಾ ಶಾಲಾ-ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು ಸರಿಯಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುವಂತಾಗಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅತ್ಯಗತ್ಯ. ಆದರೆ, ಕಾರಣಾಂತರಗಳಿಂದ ಧಾರವಾಡ ಶಹರ ವ್ಯಾಪ್ತಿಯಲ್ಲಿ ಕಚೇರಿ ಆಗಿರಲಿಲ್ಲ. ಹಾಗಾಗಿ ಧಾರವಾಡ ಶಹರ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಪ್ರತಿಯೊಂದು ಕಚೇರಿ ಕೆಲಸಕ್ಕೆ ಹುಬ್ಬಳ್ಳಿಗೆ ತೆರಳಬೇಕಾಗಿತ್ತು. ವಾರ್ಷಿಕ ಬಡ್ತಿ ಸ್ವಯಂ ಚಾಲಿತ ಬಡ್ತಿ ವೈದ್ಯಕೀಯ ರಜೆ ಗಳಿಕೆ ರಜೆ ಇನ್ನಿತರ ಕೆಲಸಗಳಿಗೆ ಹುಬ್ಬಳ್ಳಿಗೆ ಅಲೆದಾಡಬೇಕಾಗಿತ್ತು.
ಇದು ಧಾರವಾಡ ಶಹರ ವ್ಯಾಪ್ತಿಯ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಸಮಸ್ಯೆಯಾಗಿತ್ತು. ಈ ಕಾರಣದಿಂದ ಇಲ್ಲಿಯ ಸಮಸ್ತರು ಪ್ರತ್ಯೇಕ ಬಿ ಇ ಒ ಕಚೇರಿಗಾಗಿ ದಶಕಗಳಿಂದಲೂ ಮನವಿ ಮಾಡುತ್ತಲೇ ಇತ್ತು. ಆದರೆ, ಅದು ಕಾರ್ಯಗತವಾಗಿರಲಿಲ್ಲ. 2010ರಲ್ಲಿ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿ ಎಲ್ಲರು ಮನವಿ ಮಾಡಿಕೊಂಡ ಪರಿಣಾಮವಾಗಿ ಶಿಕ್ಷಣ ಮಂತ್ರಿಗಳು ಈ ಭಾಗಕ್ಕೆ ಪ್ರತ್ಯೇಕ ಬಿಇಒ ಕಾರ್ಯಾಲಯ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.
ದಿನಾಂಕ 02- 04 2010ರಂದು ನೂತನ ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಕಟ್ಟಡದ ಉದ್ಘಾಟನೆಯನ್ನು ಅಂದಿನ ಗೌರವಾನ್ವಿತ ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವರು ನೆರವೇರಿಸಿದರು. ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಿಕ್ಷಣ ಮಂತ್ರಿ ಬಸವರಾಜ್ ಹೊರಟ್ಟಿ, ಸಂಸದರಾದ ಪ್ರಹ್ಲಾದ್ ಜೋಶಿ. ಶಾಸಕಿ ಸೀಮಾ ಮಸೂತಿ, ರಾಜ್ಯ ಅಧ್ಯಕ್ಷರಾದ ಬಸವರಾಜ್ ಗುರಿಕಾರ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮೇಯರ್ ಕಾರ್ಪೊರೇಟರ್ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಅನೇಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಧಾರವಾಡ ಶಹರವಲಯದ ನೂತನ ಕಚೇರಿಯು ಪ್ರಾರಂಭಗೊಂಡು 11ವರ್ಷಗಳನ್ನು ಪೂರೈಸಿದ್ದು, ಈ ಕಚೇರಿಗೆ ಅಡಿಗಲ್ಲು ಹಾಕಿದ್ದ ಕ್ಷೇತ್ರಶಿಕ್ಷಣಾಧಿಕಾರಿಗಳೇ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಗಿರೀಶ ಪದಕಿ ಅವರು ಕಾರ್ಯನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ. ಅಂದು ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಶೇಷ ಕಾಳಜಿಯಿಂದ ಪ್ರಾರಂಭಗೊಂಡ ಈ ಕಚೇರಿ ಇಂದು ಶಿಕ್ಷಕರಿಗೆ ಸೇವಾ ಸೌಲಭ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಮೊದಲನೆಯವರಾಗಿ ಗಿರೀಶ ಪದಕಿ, ಎಸ್.ಎಂ. ಹುಡೇದಮನಿ, ಎ.ಎ. ಖಾಜಿ ಅವರುಗಳು BE0 ರವರಾಗಿ ಕಾರ್ಯನಿರ್ವಹಿಸಿದ್ದು ಶಿಕ್ಷಕರ ಮೆಚ್ಚಿನ ಅಧಿಕಾರಿಗಳಾಗಿದ್ದಾರೆ.
ಗಿರೀಶ್ ಪದಕಿ ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು & ಸುಂದರ ಗುರುಭವನ ಹಾಗೂ ನೂತನ ಸುಸಜ್ಜಿತ ಕ್ಷೇತ್ರಸಂಪನ್ಮೂಲ ಕೇಂದ್ರದ ಕಾರ್ಯಗಳು ಈಡೇರುವಂತಾಗಲಿ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಲತಾ. ಎಸ್. ಮುಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ , ಜ್ಯೋತಿ. H ಶುಭ ಹಾರೈಸಿದ್ದಾರೆ.