Exclusive- ಧಾರವಾಡ: ಬೆಣ್ಣೆಹಳ್ಳದಲ್ಲಿ ಸಿಕ್ಕಿಕೊಂಡ ಮೂವರು: ನಡೆಯುತ್ತಿದೆ ಕಾರ್ಯಾಚರಣೆ

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರದ ಬಳಿ ಹೊಲಕ್ಕೆ ಹೋಗಿದ್ದ ಮೂವರು ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡ ಘಟನೆ ನಡೆದಿದ್ದು, ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದ್ದಾರೆ.
ಗುಡಿಸಾಗರ ಗ್ರಾಮದ ಶರಣಪ್ಪ ಮೇಟಿ, ಗಂಗವ್ವ ಮತ್ತು ಬೀರಪ್ಪ ಎಂಬುವವರೇ ಬೆಣ್ಣೆಹಳ್ಳದಲ್ಲಿ ಸಿಲುಕಿಕೊಂಡಿದ್ದು, ಕಿತ್ತೂರು ಸುತ್ತಮುತ್ತ ಬಾರಿ ಮಳೆಯ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ.
ಗುಡಿಸಾಗರದಿಂದ ಕೆಲವೇ ಮೀಟರ್ ಅಂತರದಲ್ಲಿ ಸಿಲುಕಿಕೊಂಡಿರುವ ಮೂವರನ್ನ ರಕ್ಷಿಸಲು ನವಲಗುಂದ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿಎಸೈ ಜಯಪಾಲ ಪಾಟೀಲ ಸೇರಿದಂತೆ ಸಿಬ್ಬಂದಿಗಳೂ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹಳ್ಳ ರಭಸವಾಗಿ ಹರಿಯುತ್ತಿದ್ದು, ಮೂವರ ಬಳಿ ಹೋಗಲು ಯಾವುದೇ ಮಾರ್ಗವಿಲ್ಲವಾಗಿದೆ. ಕತ್ತಲು ಆವರಿಸಿದ್ದರಿಂದ ಮತ್ತಷ್ಟು ತೊಂದರೆಯಾಗುತ್ತಿದ್ದು, ರಕ್ಷಣೆ ಕಾರ್ಯಕ್ಕೆ ತೊಂದರೆಯಾಗಿದೆ.
ಈಗಾಗಲೇ ಸ್ಥಳೀಯ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಗ್ನಿಶಾಮಕ ದಳದ ಸಿಬ್ಬಂದಿಗೂ ಹಾಗೂ ಪೊಲೀಸರಿಗೂ ಸೂಚನೆ ನೀಡಿದ್ದು, ದೀಪದ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಹಳ್ಳದಲ್ಲಿ ಸಿಲುಕಿಕೊಂಡಿರುವವರಿಗೆ ಧೈರ್ಯ ತುಂಬುವ ಕೆಲಸವನ್ನ ಪೊಲೀಸ್ ಇಲಾಖೆ ಮಾಡುತ್ತಿದೆ. ಮಳೆ ಬಾರದೇ ಇದ್ದರೂ ಪ್ರವಾಹದಿಂದ ಮೂವರು ಸಿಕ್ಕಿಕೊಂಡಿದ್ದಾರೆ.