ಸಮನ್ವಯ ಸೂತ್ರದಡಿ ಕಾರ್ಮಿಕ ಕಾಯಿದೆಗೆ ತಿದ್ದುಪಡಿ: ಆಯನೂರು ಮಂಜುನಾಥ್ ಸ್ವಾಗತ

ಬೆಂಗಳೂರು: ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಕಾಯಿದೆಗೆ ಸಮನ್ವಯತೆ ಆಧಾರದ ಮೇಲೆ ಬಹಳ ವಿವೇಚನೆಯಿಂದ ತಿದ್ದುಪಡಿ ತರಲಾಗಿದೆ. ಕಾರ್ಮಿಕರಿಗೂ ಹಾಗೂ ಕೈಗಾರಿಕಾ ಮಾಲೀಕರಿಬ್ಬರಿಗೂ ಅನುಕೂಲ ಕಲ್ಪಿಸುವ ತಿದ್ದುಪಡಿ ಇದಾಗಿದೆ ಎಂದು ಮೇಲ್ಮನೆ ಸದಸ್ಯ ಹಾಗೂ ಕಾರ್ಮಿಕ ಮುಖಂಡ ಆಯನೂರು ಮಂಜುನಾಥ್ ಶ್ಲಾಘಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಕಾಯಿದೆ ತಿದ್ದುಪಡಿ ಮಾಡುವಲ್ಲಿ ದುಡುಕಿದ್ದಾರೆ. ಆದರೆ ಯಡಿಯೂರಪ್ಪ ದುಡುಕದೇ ವಿವೇಚನೆಯುಳ್ಳ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಿಂತ ಒಳ್ಳೆಯ ತೀರ್ಮಾನ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ತಿದ್ದುಪಡಿಯಲ್ಲಿ ಸೆಕ್ಷನ್59 ಅನ್ನು ಯಥಾವತ್ತಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಕಾರ್ಮಿಕ ಇಲಾಖೆ ಮೇ.20 ರಂದು ನೋಟಿಫಿಕೇಷನ್ ಹೊರಡಿಸಿ ಕಾರ್ಮಿಕ ಕಾಯಿದೆಗೆ ತಾತ್ಕಾಲಿಕ ತಿದ್ದುಪಡಿ ತಂದಿದೆ. ಕೆಲಸದ ವೇಳೆ ಮತ್ತು ಪಾಳಿಯನ್ನು ಬದಲಾಯಿಸುವಾಗ ಅಧಿಕಾರಿ ಒಪ್ಪಿಗೆ ಪಡೆಯಬೇಕಿತ್ತು. ಆದರೀಗ ಕೊರೋನಾ ನಷ್ಟ ಭರ್ತಿಗಾಗಿ ಇದಕ್ಕೆ ಯಾವುದೇ ಇಲಾಖೆಯ ಅನುಮತಿ ಬೇಕಿಲ್ಲ. ತಿದ್ದುಪಡಿ ಮೂಲಕ ಹೆಚ್ಚುವರಿ ಅವಧಿ ಕೆಲಸಕ್ಕೆ ದುಪ್ಪಟ್ಟು ಕೂಲಿ ನೀಡಲಾಗುತ್ತಿದೆ.
ಕಾರ್ಮಿಕರು ಸ್ವಯಂಇಚ್ಛೆಯಿಂದ ಹೆಚ್ಚುವರಿ ಮಾಡಬಹುದು. ಮಹಿಳೆಯರಾಗಲಿ ಯಾರೇ ಆಗಲೀ ಹೆಚ್ಚುವರಿ ಕೆಲಸ ಮಾಡಲೇಬೇಕೆಂಬ ಯಾವುದೇ ಒತ್ತಾಯವಾಗಲೀ ಕಡ್ಡಾಯವಾಗಲಿ ಇಲ್ಲ. ಹೆಚ್ಚುವರಿ ಕೆಲಸ ಮಾಡಲಿಚ್ಛಿಸುವವರು ಮಾಡಬಹುದಷ್ಟೆ. ಕೊರೋನಾದಂತಹ ಸಂಕಷ್ಟದ ಪ್ರಸಕ್ತ ಸಮಯದಲ್ಲಿ ಇದಕ್ಕಿಂತ ಒಳ್ಳೆಯ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಕಾರ್ಮಿಕರು ಹಾಗೂ ಮಾಲೀಕರಿಬ್ಬರನ್ನೂ ಗಮನದಲ್ಲಿಟ್ಟುಕೊಂಡು ಮಾಲೀಕರಿಗೆ ಹೆಚ್ಚು ಆದಾಯವಾಗುವಂತೆ ಕಾರ್ಮಿಕರಿಗೆ ಹೆಚ್ಚುವರಿ ಅವಧಿಗೆ ದುಪ್ಪಟ್ಟು ವೇತನ ಸಿಗುವಂತೆ ಸಮನ್ವಯ ಸೂತ್ರಹೆಣೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಆಯನೂರು ಮಂಜುನಾಥ್ ಹೇಳಿದ್ದಾರೆ.