ಅವಹೇಳನಕಾರಿ ಪೋಸ್ಟ್: ಕಾಂಗ್ರೆಸ್ ಶಾಸಕನ ಮನೆ ಮೇಲೆ ದಾಳಿ- ಪೊಲೀಸ್ ವಾಹನಗಳು ಜಖಂ
1 min readಬೆಂಗಳೂರು: ಒಂದು ಸಮುದಾಯದ ಬಗ್ಗೆ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಕರು ಪೋಸ್ಟ್ ಹಾಕಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ರಾತ್ರಿ ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಮನೆಯ ಮುಂದಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಶಾಸಕರು ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಎಂಬುವವರು ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ. ಫೇಸ್ ಬುಕ್ ಪೋಸ್ಟ್ ಸ್ಕ್ರೀನ್ ಶಾಟ್‌ಗಳು ವಾಟ್ಸಪ್ ಮೂಲಕ ಹರಿದಾಡಿದ್ದು, ನೂರಾರು ಜನರು ಶಾಸಕರ ಮನೆ ಮುಂದೆ ಜಮಾಯಿಸಿದ್ದಾರೆ.
ಡಿ. ಜೆ. ಹಳ್ಳಿ ಪೊಲೀಸರು, ಡಿಸಿಪಿ ಶರಣಪ್ಪ ಮುಂತಾದ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಉದ್ರಿಕ್ತ ಜನರು ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆಯೂ ಗಲಾಟೆ ಮಾಡುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಹ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಸ್ಥಳಕ್ಕೆ ಆಗಮಿಸಿದ್ದು, ಬಳಿಕ ಡಿ. ಜೆ. ಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಇಡೀ ಘಟನೆಗೆ ಫೇಸ್‌ಬುಕ್‌ನ ಅವಹೇಳನಕಾರಿ ಪೋಸ್ಟ್ ಕಾರಣವಾಗಿರೋದು ದುರಂತ…