ಸತೀಶ ಜಾರಕಿಹೊಳಿ V/S ಜಗದೀಶ ಶೆಟ್ಟರ ಸೊಸೆ….!?
1 min readಬೆಳಗಾವಿ: ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ದಿವಂಗತ ಸುರೇಶ ಅಂಗಡಿಯವರ ಪುತ್ರಿ, ಸಚಿವ ಜಗದೀಶ ಶೆಟ್ಟರ್ ಅವರ ಸೊಸೆ ಶೃದ್ಧಾ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದು, ಬಹುತೇಕ ಸೋಮವಾರ ಸಂಜೆಯ ಹೊತ್ತಿಗೆ ಟಿಕೆಟ್ ಘೋಷಣೆ ಸಾಧ್ಯತೆಯಿದೆ.
ಶೃದ್ಧಾ ಶೆಟ್ಟರ್ ಅವರನ್ನೇ ಕಣಕ್ಕಳಿಸಬೇಕೆನ್ನುವ ಕುರಿತು ಗಂಭೀರ ಚರ್ಚೆ ನಡೆದಿದ್ದು, ಮಹಾಂತೇಶ ಕವಟಗಿಮಠ, ಎಂ.ಬಿ.ಜಿರಲಿ, ಡಾ.ಗಿರೀಶ್ ಸೋನಾಲ್ಕರ್, ಡಾ,ರವಿ ಪಾಟೀಲ, ಡಾ.ಪ್ರಭಾಕರ ಕೋರೆ, ರಮೇಶ ಕತ್ತಿ, ಶಂಕರಗೌಡ ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ವಕ್ಕುಂದ ಮೊದಲಾದವರ ಹೆಸರುಗಳು ಕೂಡಾ ಕೇಳಿ ಬಂದಿವೆ.
ಸಧ್ಯದ ಬೆಳವಣಿಗೆಯಲ್ಲಿ ಶೃದ್ಧಾ ಶೆಟ್ಟರ್ ಅವರನ್ನು ಕಣಕ್ಕಿಳಿಸಿದರೆ ಅನುಕಂಪದ ಮತಗಳನ್ನು ಪಡೆಯಲು ಸಾಧ್ಯ. ಯುವಕರಿಗೆ ಅವಕಾಶ ನೀಡಿದಂತಾಗುತ್ತದೆ ಎನ್ನುವ ಕುರಿತು ಚರ್ಚೆ ನಡೆದಿದೆ. ಜೊತೆಗೆ ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆಳೆಸಲು ಸಾಧ್ಯವಾಗುತ್ತದೆ ಎನ್ನುವ ಯೋಚನೆಯೂ ಇದ್ದು, ಶೃದ್ಧಾ ಶೆಟ್ಟರ್ ಹೆಸರು ಇನ್ನೂ ಅಂತಿಮವಾಗಿಲ್ಲ. ಆದರೆ, ಆ ಕುರಿತು ಗಂಭೀರ ಚರ್ಚೆಯಂತೂ ನಡೆದಿದೆ.
ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅವರು ಹೆಚ್ಚಾಗಿ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರ ಜೊತೆಗೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳೂ ಬರಬಹುದು. ಶೃದ್ಧಾ ಶೆಟ್ಟರ್ ನಿಲ್ಲಿಸಿದರೆ ಸುರೇಶ ಅಂಗಡಿ ಪಡೆದಿದ್ದ ಸುಮಾರು 8 ಲಕ್ಷ ಮತಗಳನ್ನು ಅನುಕಂಪದ ಆಧಾರದ ಮೇಲೆ ಪಡೆಯಬಹುದು ಎನ್ನುವ ವಾದದೊಂದಿಗೆ ಚರ್ಚೆ ನಡೆದಿದೆ. ಅವರ ಹೆಸರನ್ನೇ ಅಂತಿಮಗೊಳಿಸಿದರೂ ಅಚ್ಛರಿಯಿಲ್ಲ.