ಕೃಷಿ ಹಾಳಾಗಲು ‘ಬ್ರಿಟಿಷ್ ಪಾಲ್ಸಿ’ ಕಾರಣ: “ಬಡವರ ಮಗನ” ಮಾತಿಗೆ ಬೆಂಬಲಿಸಿದ ‘ದೇಶದ ಬೆನ್ನೆಲಬು’…
1 min readಧಾರವಾಡ: ರೈತ ವಿರೋಧಿ ಪ್ರಭುತ್ವದ ವಿರುದ್ಧ ಕೃಷಿಕರು ಸಂಘಟಿತರಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶ್ರೀ ಸಾಯಿ ವಿದ್ಯಾಮಂದಿರದ ನೇತೃತ್ವ ಮತ್ತು ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ, ಶ್ರೀ ಗಜಾನನ ಯುವಕ ಮಂಡಳ ಮತ್ತು ಶ್ರೀ ಸಿದ್ಧಾರೂಢ ಯುವಕ ಮಂಡಳ ಸಹಯೋಗದಲ್ಲಿ ರೈತ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ರೈತರ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷರ ಕಾನೂನುಗಳನ್ನೇ ಈಗಲೂ ಮುಂದುವರೆಸಿಕೊಂಡು ಬಂದ ಪರಿಣಾಮ ಕೃಷಿ ಅವಸಾನದತ್ತ ಸಾಗಿದೆ. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ರೈತರ ಮತ್ತು ಕೃಷಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ನಿರಾಸಕ್ತಿ ತೋರಿದವು.
ಹವಾಮಾನದ ವೈಪರೀತ್ಯ, ಸೂಕ್ತ ಮಾರುಕಟ್ಟೆಯ ಕೊರತೆ, ಕೂಲಿಕಾರರ ಅಭಾವ, ಕೃಷಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಆದಾಗ್ಯೂ ಜನಪ್ರತಿನಿಧಿಗಳು ಸದನದ ಒಳಗೆ ಮತ್ತು ಹೊರಗೆ ಚಕಾರ ಎತ್ತುತ್ತಿಲ್ಲ. ಇದರಿಂದ ರೈತ ಸಮುದಾಯ ಹತಾಶಗೊಂಡಿದೆ.
ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ ಪರಿಣಾಮ ರಾಜ್ಯದ ಕೃಷಿಕರು ಕೊಳೆವೆಬಾವಿಗಳನ್ನು ಅವಲಂಬಿಸುವಂತಾಗಿದೆ. ಆದರೆ, ಸರಕಾರ ನೀರಾವರಿಗೆ ಅವಶ್ಯವಿರುವ ವಿದ್ಯುತ್ ಪೂರೈಸುತ್ತಿಲ್ಲ. ವಿದ್ಯುತ್ ಜಾಲ, ಬೃಹತ್ ಕಂಬಗಳ ಅಳವಡಿಕೆ ಇನ್ನಿತರ ಕಾರ್ಯಗಳಿಗೆ ರೈತರ ಜಮೀನು ಪಡೆದರೂ ರೈತರಿಗೆ ಅಗತ್ಯ ವಿದ್ಯುತ್ ಸಿಗುತ್ತಿಲ್ಲ. ಈ ಬಗ್ಗೆ ರೈತರು ಸಂಘಟಿತರಾಗಿ ಹೋರಾಡದೇ ಬೇರೆ ದಾರಿ ಇಲ್ಲ ಎಂದು ಕೊರವರ ಹೇಳಿದರು.
ಗ್ರಾಪಂ ಅಧ್ಯಕ್ಷ ನಾಗಪ್ಪ ಹಟ್ಟಿಹೊಳಿ, ಉಪಾಧ್ಯಕ್ಷ ತಿರಕಯ್ಯ ಹಿರೇಮಠ, ಭಾರತ ಸೇವಾದಳ ತಾಲೂಕ ಅಧ್ಯಕ್ಷ ಮಂಜುನಾಥ ತಿರ್ಲಾಪೂರ, ತಾಪಂ ಮಾಜಿ ಸದಸ್ಯ ಮಹದೇವ ದಂಡಿನ, ಗ್ರಾಪಂ ಸದಸ್ಯರಾದ ಚಂದ್ರಗೌಡ ಪಾಟೀಲ, ಸಂಗಪ್ಪ ಆಯಟ್ಟಿ, ಅಪ್ಪಣ್ಣ ಹಡಪದ, ಹಿರಿಯರಾದ ವೀರಭದ್ರಪ್ಪ ಗಾಣಿಗೇರ, ಶ್ರೀಶೈಲ ಕಾಶೀನಟ್ಟಿ, ಮಂಜುನಾಥ ಬಾರಕೇರ ವೇದಿಕೆಯಲ್ಲಿದ್ದರು.
ಶ್ರೀ ಸಾಯಿ ವಿದ್ಯಾಮಂದಿರ ಅಧ್ಯಕ್ಷ ಈಶ್ವರ ಗಾಣಿಗೇರ ಅಧ್ಯಕ್ಷತೆವಹಿಸಿದ್ದ ಕಾರ್ಯಕ್ರಮದಲ್ಲಿ ರೈತರು ಮತ್ತು ನಿವೃತ್ತ ಯೋಧ ಮಲ್ಲಿಕಾರ್ಜುನಗೌಡ ಪಾಟೀಲರನ್ನು ಸತ್ಕರಿಸಲಾಯಿತು.
ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಹಾಂತೇಶ ನಾಡಗೌಡ ದೇಸಾಯಿ ನಿರೂಪಿಸಿದರು. ರವಿ ಕರೀಕಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯ ಕಿತ್ತೂರ ಸ್ವಾಗತಿಸಿದರು. ವೀರಭದ್ರಪ್ಪ ಹುಂಬೇರಿ ವಂದಿಸಿದರು.
ಎತ್ತುಗಳ ಮೆರವಣಿಗೆ…
ರೈತ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಎತ್ತುಗಳ ಮೆರವಣಿಗೆಗೆ ಮಳೆಪ್ಪಜ್ಜನ ಮಠದ ಶ್ರೀ ಸಂಗಮೇಶ ಸ್ವಾಮೀಜಿ ಸಾನಿಧ್ಯದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಚಾಲನೆ ನೀಡಿದರು.