ಶಿಕ್ಷಣ ಇಲಾಖೆಯ “ಹೆಗ್ಗಣ ಹೊರಹಾಕುವಿಕೆ”- ಹೊರಟ್ಟಿಯವರ ಪತ್ರಕ್ಕೆ ಸರಕಾರದಲ್ಲಿ ಅಸಡ್ಡೆ…!?

ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸುವ ನೌಕರರನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಿಂಗಳಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾನಾ ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.
ಏಳು ವರ್ಷ ಅವಧಿ ಮೀರಿದ ನೌಕರರ ವರ್ಗಾವಣೆಗೆ ಇನ್ನೇನು ಮುಖ್ಯಮಂತ್ರಿ ಅನುಮೋದನೆ ನೀಡಲಿದ್ದಾರೆ ಎಂಬ ಸುದ್ದಿಯು ಕಳೆದ ತಿಂಗಳಿಂದಲೇ ಚರ್ಚೆಯಲ್ಲಿದ್ದರೂ, ಈವರೆಗೆ ಯಾವುದೇ ಅಧಿಕೃತ ಆದೇಶ ಬಾರದೇ ಇರುವುದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಇಲ್ಲಿಯವರೆಗೆ ಶಿಕ್ಷಕರ ಅನಭಿಷಿಕ್ತ ನಾಯಕರೆಂದೇ ಪರಿಗಣಿಸಲ್ಪಟ್ಟಿದ್ದ ಹೊರಟ್ಟಿಯವರ ಪ್ರಭಾವ ಸರಕಾರದ ಮಟ್ಟದಲ್ಲಿ ಕಡಿಮೆಯಾಗುತ್ತಿದೆಯೇ.? ಅಥವಾ ತಮ್ಮ ರಾಜಕೀಯ ಅಸ್ತಿತ್ವವನ್ನು ಜೀವಂತವಾಗಿಡಲು ಹೊರಟ್ಟಿಯವರು ಹೀಗೆ ಆಗಾಗ ಪತ್ರ ಬರೆದು, ಅದನ್ನು ಪಾಲ್ಲೋ ಅಪ್ ಮಾಡದೆ ಜಾಣ ಮೌನ ವಹಿಸಿ ಬಿಡುತ್ತಾರೆಯೇ? ಎನ್ನುವ ಸಂಶಯ ಶಿಕ್ಷಕರಲ್ಲಿ ಮೂಡಲು ಆರಂಭವಾಗಿದೆ.
ಏತನ್ಮಧ್ಯೆ, ಧಾರವಾಡದಲ್ಲಿ ಶಾ-Money & ಗ್ಯಾಂಗ್ ಸಂತಸದ ಉತ್ತುಂಗದಲ್ಲಿ ತೇಲುತ್ತಾ, ಕೇಕೆ ಹಾಕುತ್ತಿದ್ದು, “ಯಾರಿಂದಲೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಏನು ಮಾಡುವರು… ನಮಗೇನು ಕೇಡು ಮಾಡುವರು…ಧೈರ್ಯವಿರುವವರು ಬರಲಿ… ನಮ್ಮ ವಿರುದ್ಧ ಇನ್ನು ಹತ್ತು ಪತ್ರ ಬರೆಯಲಿ…ನಮ್ಮ ಒಂದು ಕೂದಲನ್ನೂ ಕೊಂಕಿಸಲೂ ಆಗದು” ಎಂದು ಕುಹಕವಾಡುತ್ತಿದ್ದು, ಇದು ಹುಬ್ಬಳ್ಳಿಯ ದೇಸಾಯಿ ಸರ್ಕಲ್ ಹತ್ತಿರ ಇರುವವರೂ ಕೇಳುವ ಹಾಗಿದೆ.
ಅಪರ ಆಯುಕ್ತಾಲಯದಲ್ಲೇ ನಿವೃತ್ತಿ ಹೊಂದಿ ದಾಖಲೆ ಸೃಷ್ಟಿಸುತ್ತೇವೆ ಎಂದು ಅವರ ಆತ್ಮೀಯ ಸಹೋದ್ಯೋಗಿಗಳ ಮುಂದೆ ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ‘ಕೆವಿ’ ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮ್ಯನವರ ಆತ್ಮೀಯರ ಗುಂಪಿನಲ್ಲಿವೊಬ್ಬರು ಎಂದು ಪರಿಗಣಿಸಲಾಗುತ್ತಿದ್ದ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪೆಡೆಗೊಂಡಿದ್ದರಿಂದ, ಸದ್ಯ ಕಾಂಗ್ರೆಸ್ ಸರ್ಕಾರ ಹೊರಟ್ಟಿಯವರ ಸಲಹೆ, ಶಿಫರಾಸುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಪ್ರಶ್ನೆ ಶಿಕ್ಷಣ ಇಲಾಖೆಯಲ್ಲಿ ಪ್ರತಿಧ್ವನಿಸುತ್ತಿದೆ.
“ಭ್ರಷ್ಟರ ಅಟ್ಟಹಾಸದ ಮುಂದೆ ಸೋಲಿಲ್ಲದ ಸರದಾರನ ಧ್ವನಿ ಕ್ಷೀಣಿಸುತ್ತಿದೆಯೇ?” ಎಂದು ಶಿಕ್ಷಕರೊಬ್ಬರು ಕೇಳುವಾಗ ಅವರ ಧ್ವನಿಯಲ್ಲಿ ಆತಂಕದ ಛಾಯೆ ಕಾಣುತ್ತಿತ್ತು.