Posts Slider

Karnataka Voice

Latest Kannada News

ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ…!

1 min read
Spread the love

ಬೆಂಗಳೂರು: ವಿಧಾನಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಬಸವರಾಜ್ ಹೊರಟ್ಟಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾರಣ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ ದೇವೇಗೌಡರಿಗೆ ಇಂದು ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

ಫೆಬ್ರವರಿ 9ರಂದು ನಡೆದ ಪರಿಷತ್ ಸಭಾಪತಿ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್​ ಭಾಗಿಯಾಗಿರಲಿಲ್ಲ. ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಬೆಂಬಲದೊಂದಿಗೆ ಅವಿರೋಧವಾಗಿ ಸಭಾಪತಿಯಾಗಿ ಆಯ್ಕೆಯಾಗಿದ್ದರು.

ವಿಧಾನ ಪರಿಷತ್ತಿನ ಒಳಗೆ ಮೊಬೈಲ್‌ ಫೋನ್‌ಗಳನ್ನು ತರುವುದಕ್ಕೆ ನಿಷೇಧ ವಿಧಿಸುವುದೂ ಸೇರಿ ಕೆಲವು ನಿಯಮಾವಳಿಗಳನ್ನು ಜಾರಿ ತರಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ಖಾಸಗಿ ಸುದ್ದಿವಾಹಿನಿಗಳ ಕ್ಯಾಮರಾಗಳ ಪ್ರವೇಶಕ್ಕೆ ನಿರ್ಬಂಧ ಇರುವುದಿಲ್ಲ. ಆದರೆ, ವಿವೇಕ ಮತ್ತು ವಿವೇಚನೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಕೆಲವು ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿ ಇಡೀ ದಿನ ಟಿ.ವಿ.ಗಳಲ್ಲಿ ತೋರಿಸಲಾಗುತ್ತದೆ. ಸದನದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರೂ ಅದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಆ ಬಗ್ಗೆ ಎಚ್ಚರಿಕೆ ನೀಡುವುದು ಮಾಧ್ಯಮಗಳ ಕರ್ತವ್ಯ ಎಂಬುದು ನಿಜ. ಆದರೆ, ಇಡೀ ಸದನವೇ ಸರಿಯಾಗಿ ನಡೆಯುತ್ತಿಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೊರಟ್ಟಿ ಹೇಳಿದರು.

ಹೀಗೆಂದ ಮಾತ್ರಕ್ಕೆ ಮಾಧ್ಯಮವನ್ನು ದೂರ ಇಡುವುದೂ ಇಲ್ಲ, ನಿಷೇಧ ವಿಧಿಸುವುದಿಲ್ಲ. ಹೆಚ್ಚು ಸ್ವಯಂ ನಿಯಂತ್ರಣ ಮತ್ತು ವಿವೇಕದಿಂದ ಕಾರ್ಯ ನಿರ್ವಹಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ ಎಂದರು.

ವಿಧಾನ ಪರಿಷತ್‌ ಅಧಿವೇಶನವೂ ಮಾ.4 ರಿಂದಲೇ ಆರಂಭವಾಗುತ್ತದೆ. ಆದರೆ ಒಂದು ದೇಶ ಮತ್ತು ಒಂದು ಚುನಾವಣೆ ವಿಚಾರವಾಗಿ ಚರ್ಚೆ ನಡೆಸುವ ಸಂಬಂಧ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ನಾವು ಪ್ರಶ್ನೋತ್ತರ ಮತ್ತು ಇತರ ಕಲಾಪಗಳನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೊರಟ್ಟಿ ಹೇಳಿದರು.

ಮೀಸಲಾತಿಗೆ ಬಡತನವೇ ಮಾನದಂಡವಾಗಲಿ: ಇಂದಿನ ದಿನಗಳಲ್ಲಿ ಕುಟುಂಬಗಳ ಆರ್ಥಿಕ ವ್ಯವಸ್ಥೆಯನ್ನು ನೋಡಿ ಮೀಸಲಾತಿ ನಿಗದಿ ಮಾಡಬೇಕು. ಆಗ ಎಲ್ಲ ಸಮುದಾಯಗಳ ಬಡವರಿಗೂ ನ್ಯಾಯ ಸಿಗುತ್ತದೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಅವರು(ಮಠಾಧೀಶರು) ದೊಡ್ಡವರು, ಅವರ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಎಂದರು.


Spread the love

Leave a Reply

Your email address will not be published. Required fields are marked *

You may have missed