ಬಸವೇಶ್ವರ ಮೂರ್ತಿ ಕೈ ಮುರಿದ ಪ್ರಕರಣ: ಗ್ರಾಮದಲ್ಲೇ ಇದ್ದರು ತಪ್ಪು ಮಾಡಿದವರು..!
1 min readಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ ಮುರಿದಿದ್ದು ಆಕಸ್ಮಿಕ ಘಟನೆಯಿಂದ ಎನ್ನುವ ಸತ್ಯ ಬಯಲಾಗಿದೆ. ಘಟನೆಗೆ ಕಾರಣರಾದವರು ಭಯದಿಂದ ಮಾಹಿತಿ ಮುಚ್ಚಿಟ್ಟಿದ್ದರು ಎನ್ನುವುದೀಗ ಬೆಳಕಿಗೆ ಬಂದಿದೆ.
ನ.8 ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಇದರಿಂದ ಎಲ್ಲೆಡೆ ಭಾರಿ ಪ್ರತಿಭಟನೆ ನಡೆದಿತ್ತು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಇದೀಗ ಗ್ರಾಮದ ಐವರು ಹಿರಿಯರು ಸೇರಿ ಪೊಲೀಸರಿಗೆ ಹೇಳಿಕೆಯೊಂದನ್ನು ನೀಡಿದ್ದು, ತಾವು ನೀಡಿದ್ದ ಪೊಲೀಸ್ ದೂರನ್ನು ಹಿಂದಕ್ಕೆ ಪಡೆದಿದ್ದಾರೆ.
ಸಿದ್ದಪ್ಪ ನರಗುಂದ, ರಾಘವೇಂದ್ರ ಹುರಕಡ್ಲಿ ಮತ್ತು ಮಹಾಂತೇಶ ನರಗುಂದ ಎನ್ನುವ ಮೂವರು ಸೇರಿ ರಾತ್ರಿ 2 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಹಾಯಿಸಲು ಹೋಗುವಾಗ ಬಸವೇಶ್ವರ ಮೂರ್ತಿಯ ಮೇಲಿನ ಶಾಲು ಕೆಳಗೆ ಬಿದ್ದಿರುವುದನ್ನು ನೋಡುತ್ತಾರೆ. ಸಿದ್ದಪ್ಪ ಶಾಲು ಹಾಕಲು ಮೇಲೇರಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೊಣಕಾಲು ಬಸವೇಶ್ವರರ ಮೂರ್ತಿಯ ಕೈ ಮೇಲೆ ತಾಗಿ ಕೈ ಮುರಿದು ಹೋಗಿತ್ತು.
ಆದರೆ ಘಟನೆಯಿಂದ ಭಯಗೊಂಡ ಮೂವರೂ ಸೇರಿ ಕೈಯನ್ನು ರಸ್ತೆ ಪಕ್ಕದಲ್ಲಿ ಎಸೆದು ವಿಷಯ ಮುಚ್ಚಿಟ್ಟಿದ್ದರು. ಇದೀಗ ವಿಷಯ ಬಾಯಿ ಬಿಟ್ಟಿದ್ದು, ಗ್ರಾಮಸ್ಥರು ದೂರನ್ನು ಹಿಂದಕ್ಕೆ ಪಡೆದಿದ್ದಾರೆ.
ಆದರೆ, ಈ ಘಟನೆಯಿಂದ ಹಲವೆಡೆ ಪ್ರತಿಭಟನೆಗಳು ನಡೆದು, ತಪ್ಪು ಮಾಡಿದವರನ್ನ ಬಂಧನ ಮಾಡುವಂತೆ ಆಗ್ರಹಿಸಲಾಗಿತ್ತು.