“ಯತ್ನಾಳ, ಬೆಲ್ಲದ”ರನ್ನ ಬಿಜೆಪಿ ಏನೂ ಮಾಡ್ತಿಲ್ಲಾ… ಏಕೆ…!?
1 min readಬೆಂಗಳೂರು: ಭಾರತೀಯ ಜನತಾ ಪಕ್ಷದ ಉತ್ತರ ಕರ್ನಾಟಕದ ಇಬ್ಬರು ಪ್ರಮುಖ ಶಾಸಕರನ್ನ ಮುನ್ನೆಲೆಗೆ ಬರುವಂತೆ ಮಾಡಿ, ಮೂಲೆಗುಂಪು ಮಾಡುವ ನಿರಂತರ ಪ್ರಕ್ರಿಯೆ ಮುಂದುವರೆದಿದ್ದು, ಈ ಇಬ್ಬರು ನಾಯಕರು ಸತ್ಯವನ್ನರಿಯುವುದು ಯಾವಾಗ ಎಂಬ ಪ್ರಶ್ನೆ ಮೂಡಿದೆ.
ಉತ್ತರ ಕರ್ನಾಟಕದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಉತ್ತರ ಕರ್ನಾಟಕದಲ್ಲಿ ಹಿಂದು ಹುಲಿ ಎಂದೂ ಹಿಂದು ಫೈರ್ ಬ್ರ್ಯಾಂಡ್ ಎಂದು ಖ್ಯಾತಿ ಪಡೆದಿದ್ದಾರೆ. ಕಾರ್ಯಕರ್ತರ ಆಕರ್ಷಣೆಯ ಕೇಂದ್ರ ಬಿಂದು ಎಂಬುದನ್ನ ಅಲ್ಲಗಳೆಯುವಂತಿಲ್ಲ.
ಯತ್ನಾಳ ಅವರು ಬಿಜೆಪಿಯ ಹಲವು ಮುಖಂಡರ ವಿರುದ್ಧ ನೇರಾನೇರ ಹೇಳಿಕೆ ನೀಡಿ ದಕ್ಕಿಸಿಕೊಂಡಿದ್ದಾರೆ. ಹಾಗಾಗಿಯೇ ಈ ಬಾರಿ ಅವರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕರಾಗುವ ಲಿಸ್ಟ್‌ನಲ್ಲಿ ಇದೆ ಎಂದು ಹೇಳಲಾಗಿತ್ತು.
ಯತ್ನಾಳ ಅವರ ರೀತಿಯಲ್ಲೇ ಧಾರವಾಡ-74 ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರದ್ದು ಆಗಿದೆ. ಬಿಜೆಪಿ ಸರಕಾರವಿದ್ದಾಗ ಸಿಎಂ ಆಗಿಯೇ ಬಿಟ್ರು ಅಂದ್ರು, ಕೊನೆಗೆ ಮಂತ್ರಿಯೂ ಆಗಲಿಲ್ಲ, ಈಗ ಅದೇ ದಾರಿಯ ನಡೆಗಳು ಕಾಣತೊಡಗಿವೆ.
ಶಾಸಕ ಅರವಿಂದ ಬೆಲ್ಲದ್ ಅವರು, ಪ್ರಮುಖ ಸ್ಥಾನ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಅಸಲಿ ಕಾರಣವನ್ನ ಶಾಸಕರು ಅರ್ಥ ಮಾಡಿಕೊಂಡಿಲ್ಲವೆಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ವಿರೋಧಿಸುವ ಗುಂಪುಗಳು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ ಬೆಲ್ಲದ್ ಅವರನ್ನ ಮುನ್ನೆಲೆಗೆ ಬಿಟ್ಟು, ಕೊನೆಗಳಿಗೆಯಲ್ಲಿ ಏನೂ ಮಾಡದೇ ಕೈಬಿಡುವ ಹುನ್ನಾರ ನಡೆಯುತ್ತಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ.
ಕಿಸೆಯಲ್ಲಿ “ಕೊಟ್ಟ ಚೀಟಿ” ಇಟ್ಟುಕೊಂಡು ರಾಜಕಾರಣ ಮಾಡುವ ಬದಲು ಕೊನೆವರೆಗೂ “ಕೈ” ಹಿಡಿಯುವ ರಾಜಕಾರಣವನ್ನ ಕಲಿಯುವ ಅವಶ್ಯಕತೆ ಇದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.