ಹುಬ್ಬಳ್ಳಿಯಲ್ಲಿ ಬ್ಯಾಂಕ್ ಮಹಿಳಾ ಮ್ಯಾನೇಜರಗೆ 24.95ಲಕ್ಷ ಟೋಪಿ…!

ಹುಬ್ಬಳ್ಳಿ: ಉಣಕಲ್ ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕರನ್ನೇ ಆನ್ ಲೈನ್ ವಂಚಕನೊಬ್ಬ ನಂಬಿಸಿ 24 ಲಕ್ಷ 95 ಸಾವಿರ 900 ರೂಪಾಯಿಗಳನ್ನ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಕರೆ ಮಾಡಿ ನಂಬಿಸಿರುವ ವಂಚಕ, 24.95.900 ರೂಪಾಯಿಗಳನ್ನ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.

ಫೆಬ್ರುವರಿ 20ರಂದು ಬೆಳಿಗ್ಗೆ 11.30ರ ವೇಳೆ ಬ್ಯಾಂಕ್ ವ್ಯವಸ್ಥಾಪಕಿ ಮೀನಾ ಕೆ.ವಿ ಅವರಿಗೆ ಕರೆ ಮಾಡಿದ ವಂಚಕ ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ಸುನೀಲ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದಾನೆ. ಬ್ಯಾಂಕಿನ ಬಡ್ಡಿ ಮತ್ತು ಓವರ್ ಡ್ರಾಫ್ಟ್ ಸೌಲಭ್ಯದ ಬಗ್ಗೆ ಮಾತನಾಡಬೇಕಿದ್ದು, ಮಧ್ಯಾಹ್ನ 3ಕ್ಕೆ ಸಭೆಯಿದೆ, ಬ್ಯಾಂಕಿನವರು ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾನೆ.
ವಂಚಕ ಮತ್ತೆ ಮಧ್ಯಾಹ್ನ 1ಕ್ಕೆ ಮತ್ತೆ ಕರೆ ಮಾಡಿ ಕೆಲಸದ ಮೇರೆಗೆ ಬೆಳಗಾವಿಗೆ ಬಂದಿದ್ದು, ವಾಟ್ಸಾಪ್ ಗೆ ಕಳುಹಿಸುವ ಗ್ರಾಹಕರ ಖಾತೆಗೆ ತುರ್ತಾಗಿ ನಮ್ಮ ಕಂಪನಿಯ ಖಾತೆಯಿಂದ ಹಣ ಆರ್ ಟಿಜಿಎಸ್ ಮಾಡಲು ಕೋರಿದ್ದಾನೆ. ಅದರಂತೆ ಬ್ಯಾಂಕ್ ವ್ಯವಸ್ಥಾಪಕರು ತರುಣ ಶರ್ಮಾ ಹೆಸರಿನ ಐಸಿಐಸಿಐ ಬ್ಯಾಂಕ್ ಖಾತೆಗೆ 9.85.700 ರೂಪಾಯಿ ಹಾಗೂ ಉಜಾಲಾ ಗುಪ್ತಾ ಹೆಸರಿನ ಖಾತೆಗೆ 15.10.200 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ.
ವಂಚಕ ತಿಳಿಸಿದಂತೆ ಉಣಕಲ್ ನಲ್ಲಿರುವ ಆರ್.ಎನ್.ಎಸ್ ಮೋಟಾರ್ಸಗೆ ಮಧ್ಯಾಹ್ನ 3ಕ್ಕೆ ವ್ಯವಸ್ಥಾಪಕಿ ಮೀನಾ ಸಭೆಗೆ ತೆರಳಿದಾಗ, ತಾವೂ ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣವೇ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.