Posts Slider

Karnataka Voice

Latest Kannada News

ಜೂನ್ 07 ರಿಂದ ಜೂನ್ 11, 2021 ರವರೆಗೆ ಬ್ಯಾಂಕಿಂಗ್ ಸಮಯದಲ್ಲಿ ಬದಲಾವಣೆ…!

Spread the love

ಹುಬ್ಬಳ್ಳಿ: ಇತ್ತೀಚೆಗೆ ರಾಜ್ಯ ಸರ್ಕಾರವು ಜೂನ್ 14 ರವರೆಗೆ  ಲಾಕ್ ಡೌನ್    ಮುಂದುವರೆಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯು ಇಂದು ಬೆಂಗಳೂರಿನಲ್ಲಿ ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ಶಾಖೆಗಳು, ವಲಯ/ ಕ್ಷೇತ್ರೀಯ ಕಾರ್ಯಾಲಯಗಳಿಗೆ ಬ್ಯಾಂಕುಗಳ ಪರಿಷ್ಕೃತ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಬ್ಯಾಂಕಿಂಗ್ ವ್ಯವಹಾರದ ಸಮಯವು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 03.00 ರವರೆಗೆ ಮತ್ತು ಕೆಲಸದ ಸಮಯವು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 04.00 ರವರೆಗೆ (ಆಡಳಿತ ಕಛೇರಿಗಳು ಸೇರಿದಂತೆ). ಈ ಪರಿಷ್ಕೃತ ಸಮಯದ ವ್ಯವಸ್ಥೆಯು 07.06.2021 ರಿಂದ 11.06.2021 ರ ವರೆಗೆ ಜಾರಿಯಲ್ಲಿರುತ್ತದೆ. ದಿನಾಂಕ 14.06.2021 ರಂದು ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯು ತಿಳಿಸಿದೆ. ಬ್ಯಾಂಕುಗಳಲ್ಲಿ ನಡೆಯುತ್ತಿರುವ ಆಧಾರ್‌ ನೋಂದಣಿ ಕೇಂದ್ರಗಳ ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ.

ಶಾಖೆಗಳು ಕೇವಲ ಮೂಲಭೂತ ಬ್ಯಾಂಕಿಂಗ್ ಸೇವೆಗಳಾದ ನಗದು ವ್ಯವಹಾರಗಳು, ಕ್ಲಿಯರಿಂಗ್ ಸೇವೆಗಳು, ಹಣ ವರ್ಗಾವಣೆ, ಸರಕಾರಿ ವ್ಯವಹಾರಗಳು,  ಹೊಸ ಬೆಳೆಸಾಲಗಳ (ಕೆ.ಸಿ.ಸಿ) ಮಂಜೂರಾತಿ/ನವೀಕರಣ,  ಭಾರತ ಸರ್ಕಾರದ ಇ.ಸಿ.ಎಲ್.ಜಿ.ಎಸ್. 1, 2, 3, 4 ಮತ್ತು ಪಿ.ಎಮ್ ಸ್ವನಿಧಿ 1, 2 ಹಾಗೂ ಅರ್ಹ ಸಾಲಗಾರರಿಗೆ ಒಂದು ಬಾರಿ ಸಾಲ ಪುನಾರಚನೆ ವ್ಯವಸ್ಥೆಯನ್ನು ಪಡೆಯುವುದಕ್ಕಾಗಿ ಮಾತ್ರ ತೆರೆದಿರುತ್ತದೆ.

ಗ್ರಾಹಕರು ಡಿಜಿಟಲ್ ಸೇವೆಗಳಾದ ಎಟಿಎಮ್, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಉಪಯೋಗಿಸಿಕೊಂಡು ಬ್ಯಾಂಕುಗಳಿಗೆ ಭೇಟಿ ನೀಡುವ ಸಂದರ್ಭವನ್ನು ಕಡಿಮೆಗೊಳಿಸಲು ಈ ಮೂಲಕ ಕೋರಲಾಗಿದೆ. ಬ್ಯಾಂಕಿಂಗ್ ಮಿತ್ರರ ಸೇವೆಗಳನ್ನು (ಅಂಚೆ ಕಛೇರಿಯ ಬ್ಯಾಂಕ್ ಮಿತ್ರರ ಸೇವೆಯೂ ಸೇರಿ) ಆಯಾಯಾ ಗ್ರಾಮಗಳಲ್ಲಿ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ತಮ್ಮ ಗ್ರಾಮಗಳಲ್ಲಿ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.

ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಶಾಖೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರ  ಕಾಪಾಡುವುದು ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ  ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಅಣ್ಣಯ್ಯ.ಆರ್ ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *