ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕೆಂದು ಹೊರಟವನಿಗೆ ಜರ್ನಲಿಸಂ ಕೈ ಬೀಸಿ ಕರೆದಿತ್ತು…
1 min readಹುಬ್ಬಳ್ಳಿ: ಮನೆಯ ಸ್ಥಿತಿಗೆ ಅನುಗುಣವಾಗಿ ಬದುಕಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಂಡು, ತಂಗಿಯನ್ನ ಮದುವೆ ಮಾಡಿಕೊಟ್ಟರೇ ಸಾಕು ಎಂದು ದುಡಿಯಲು ಬೆಂಗಳೂರಿಗೆ ಹೋದ ಯುವಕನಿಗೆ ಜರ್ನಲಿಸಂ ಕೈ ಬೀಸಿ, ಕರೆದಿದ್ದರಿಂದಲೇ ಬೆರಳೆಣಿಕೆ ವರ್ಷದಲ್ಲಿ ಎಲ್ಲರೂ ಅಚ್ಚರಿ ಪಡುವಂತೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಜಿಲ್ಲಾ ಪ್ರಶಸ್ತಿಗೆ ಅದೇ ಯುವಕ ಆಯ್ಕೆಯಾಗಿದ್ದಾರೆ.
ಹೌದು.. ಫಸ್ಟ್ ನ್ಯೂಸ್ ಚಾನಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣ್ಣಿಗೇರಿ ಪಟ್ಟಣದ ಶ್ರೀಧರ ಮುಂಡರಗಿಗೆ ವಸಂತ ಹೊರಟ್ಟಿಯವರು ಕೊಡಮಾಡುವ (ಆಕ್ಸಫರ್ಡ್ ಕಾಲೇಜ್) ಅತ್ಯುತ್ತಮ ಟಿವಿ ವರದಿಗೆ ಭಾಜನರಾಗಿದ್ದಾರೆ. ಇವರ ಕಾಂಕ್ರೀಟ್ ಕಾಡಲ್ಲಿ ಚಂಬು ಕುಟುಕಿದ ಜೀವನ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ತಂದೆ ಅಪ್ಪಣ್ಣ ಮುಂಡರಗಿ ಹಾಗೂ ತಾಯಿ ಭಾಗ್ಯ ಅವರ ಇಬ್ಬರು ಮಕ್ಕಳ ಪೈಕಿ ಶ್ರೀಧರ, ಅಚ್ಚುಕಟ್ಟಾಗಿ ಶಿಕ್ಷಣ ಪಡೆಯುತ್ತಿದ್ದ. ಆದರೆ, ಡಿಗ್ರಿ ಮುಗಿದ ಮೇಲೆ ಕಲಿಯುವುದು ದುಸ್ತರವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಅಪ್ಪನ ಮೇಲೆ ಎಷ್ಟೊಂದು ಭಾರ ಹಾಕುವುದೆಂದು.
ತಂದೆ ಅಪ್ಪಣ್ಣ ಅವರು ಹಿಟ್ಟಿನ ಗಿರಣಿಯನ್ನ ನೋಡಿಕೊಂಡು ಹೋಗುತ್ತಿದ್ದರಿಂದ ಶ್ರೀಧರ, ಬೆಂಗಳೂರಿಗೆ ಹೋಗಿ ದುಡಿಯುವ ಮನಸ್ಸು ಮಾಡಿದ. ಆದರೆ, ಪರಿಚಯದವರೊಬ್ಬರು, ನೀ ಇಲ್ಲಿಗೆ ಬಂದು ಜರ್ನಲಿಸಂ ಮಾಡು ಎಂದು ಪ್ರೇರಪಣೆ ನೀಡಿದರು. ಸಾಕಷ್ಟು ಸಹಕಾರ ನೀಡಿದ್ದರಿಂದ ಎಂಎ ಮಾಡಿ, ನೇರವಾಗಿ ಸುವರ್ಣ ಚಾನಲ್ ನಲ್ಲಿ ಇಂಟರಶಿಫ್ ಗೆ ಸೇರಿಕೊಂಡರು. ಅಲ್ಲಿಂದ ರಾಜ್ ನ್ಯೂಸ್, ಪ್ರಜಾ ಟಿವಿ, ದಿಗ್ವಿಜಯದಲ್ಲಿ ಕಾರ್ಯನಿರ್ವಹಿಸಿ, ಕಳೆದ ಮೂರು ವರ್ಷದಿಂದ ಫಸ್ಟ್ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಧರ ಅವರ ಕನಸಿಗೆ ನೀರೆರೆಯುವುದಕ್ಕೆ ಈ ಪ್ರಶಸ್ತಿ ಸಿಕ್ಕಿದೆ. ಕಡಿಮೆ ಅವಧಿಯಲ್ಲಿ ಇಂತಹದಕ್ಕೆ ತಮ್ಮನ್ನ ಆಯ್ಕೆ ಮಾಡಿರುವುದು ಮತ್ತಷ್ಟು ಉತ್ಸಾಹ ಮೂಡಿಸಿದೆ ಎನ್ನೋದು ಶ್ರೀಧರ ಉವಾಚ.
ಅಣ್ಣಿಗೇರಿಯಂತಹ ಪ್ರದೇಶದಲ್ಲಿ ಹಿಟ್ಟಿನ ಗಿರಣಿಯ ನೆರಳಡಿ ತಂದೆಯ ಕನಸನ್ನ ನನಸು ಮಾಡುತ್ತಿರುವ ಶ್ರೀಧರನಂತಹ ಯುವ ಜರ್ನಲಿಸ್ಟ್ ಗಳಿಗೆ ಪ್ರಶಸ್ತಿ ಸಿಕ್ಕಿರುವುದು ಹೊಸತನಕ್ಕೆ ಕಾರಣವಾಗಿದೆ. ತಾವೂ ಬೆಳೆದ ರೀತಿಯನ್ನ ನೆನಪಲ್ಲಿಟ್ಟುಕೊಂಡು ಮುನ್ನಡೆಯುವ ಜವಾಬ್ದಾರಿ, ಹೊಸ ಪ್ರತಿಭೆಗಳಿಗಿದೆ.
ಕಂಗ್ರಾಟ್ಸ್ ಶ್ರೀಧರ.. ನಿಮ್ಮ ಮುಂದಿನ ಜೀವನ ಮತ್ತಷ್ಟು ಸುಖಮಯವಾಗಲಿ..