ಉಂಡೂ ಹೋದಾ.. ಕೊಂಡು ಹೋದ.. ಕಡೆಗೂ ಸಿಕ್ಕಿಬಿದ್ದ ಕಳ್ಳ ಕುಲಕರ್ಣಿ..!
1 min readಹುಬ್ಬಳ್ಳಿ: ಮದುವೆ ಮಾಡಿ ಚೆನ್ನಾಗಿ ಉಂಡು ತಿಂದು ನಂತರ ಬಂಗಾರದ ಆಭರಣಗಳನ್ನ ಎಗರಿಸಿ ಪರಾರಿಯಾಗಿ ವಾಣಿಜ್ಯನಗರಿಯಲ್ಲಿ ಚಿನ್ನವನ್ನ ಮಾರಾಟ ಮಾಡುವ ಸಮಯದಲ್ಲಿ ಪೊಲೀಸರಿಗೆ ಸಿಕ್ಕು ಕಂಬಿ ಹಿಂದೆ ಹೋಗುವ ಸ್ಥಿತಿಗೆ ಬೀಗ ವಿದ್ಯಾರ್ಥಿ ಬಂದಿರುವ ಘಟನೆ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಮುರಗೋಡ ಪಟ್ಟಣದಲ್ಲಿ ಮದುವೆಗೆ ಹೋಗಿದ್ದ ರಾಣೆಬೆನ್ನೂರಿನ ಕೋಟೆ ದ್ಯಾಮವ್ವನ ಗುಡಿ ಹತ್ತಿರದ ನಿವಾಸಿ ಶಂಕರ ಕೇಶವ ಕುಲಕರ್ಣಿ ಬಂಧಿತನಾಗಿದ್ದು, ಡಿಪ್ಲೋಮಾ ಫಸ್ಟ್ ಸೆಮ್ ವಿದ್ಯಾರ್ಥಿಯಾಗಿದ್ದಾನೆ. ಈತ ಎಷ್ಟೊಂದು ಚಾಲಾಕಿ ಎಂಬುದನ್ನ ನೀವೇ ಪೂರ್ತಿಯಾಗಿ ನೋಡಿ ತಿಳಿದುಕೊಳ್ಳಿ.
ಶಂಕರ ಕುಲಕರ್ಣಿ, ಮದುವೆಗಾಗಿ ಹೋಗಿದ್ದು ಒಳ್ಳೆಯ ಪ್ಲಾನ್ ಮಾಡಿಕೊಂಡೇ. ನೋಡಲು ಒಳ್ಳೆಯವನಂತೆ ಕಾಣುತ್ತಿದ್ದವ ಮದುವೆ ಮನೆಯ ಮುಂದಿನ ಮನೆಯಲ್ಲೇ ಸ್ಕೇಚ್ ಹಾಕಿ ಬರೋಬ್ಬರಿ 85 ಗ್ರಾಂ ತೂಕದ ಎರಡು ಬಂಗಾರದ ಸರಗಳನ್ನ ಕಳ್ಳತನ ಮಾಡಿಕೊಂಡು ಪರಾರಿಯಾಗಿ ಹುಬ್ಬಳ್ಳಿಗೆ ಬಂದಿದ್ದ.
ಬಂದಿದ್ದೇ ತಡ ಇಲ್ಲಿಯೇ ಮಾರಾಟ ಮಾಡುತ್ತಿದ್ದಾಗ ಸಂಶಯಗೊಂಡವರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳ ಕುಲಕರ್ಣಿಯಿಂದ 85ಗ್ರಾಂ ಚಿನ್ನದ ಸರ, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಡಿಸಿಪಿ ಕೆ.ರಾಮರಾಜನ, ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಬಾಬಾ, ಸದಾಶಿವ ಕಾಣಟ್ಟಿ ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ರಾಮರಾವ್ ರಾಥೋಡ್ ಕಾರ್ಯಾಚರಣೆಯನ್ನ ನಡೆಸಿದ್ದಾರೆ.