ಕಲ್ಯಾಣ ಕರ್ನಾಟಕದ ಕಿರಾತಕರು: ಪತ್ರಕರ್ತ, ರೌಡಿಷೀಟರ್ ಬಂಧನ- ಗೂಗಲ್ ಪೇ ಮೂಲಕ ಹಣ ಪಡೆದ ಬ್ಯ್ಲಾಕ್ ಮೇಲರ್ಸ್
1 min readಕಲಬುರಗಿ: ತಾವುಗಳು ನ್ಯೂಸ್ ಚಾನಲ್ ವರದಿಗಾರರು ಎಂದು ಹೇಳಿ ರಸ್ತೆ ಮಧ್ಯೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಅಕ್ಕಿ ಲಾರಿಯನ್ನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನ ಬಂಧಿಸುವಲ್ಲಿ ಕಲಬುರಗಿ ಜಿಲ್ಲೆ ಜೇವರ್ಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾವು ಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ವರದಿಗಾರರು ಎಂದು ಹೇಳಿ ಜೇವರ್ಗಿ ಹೊರವಲಯದ ಕಲ್ಲೂ ಅವರಾದ ರಸ್ತೆಯಲ್ಲಿ ಲಾರಿ ಅಡ್ಡಗಟ್ಟಿದ ಮೂವರು ಆರೋಪಿಗಳು ಲಾರಿಯಲ್ಲಿ ಕಳ್ಳತನದ ಅಕ್ಕಿ ಸಾಗಿಸಲಾಗುತ್ತಿದೆ. ಹಣ ಕೊಡದಿದ್ದರೆ ಟಿವಿಯಲ್ಲಿ ವಿಷಯ ಹಾಕುವುದಾಗಿ ಬೆದರಿಸಿದ್ದಾರೆ. ಚಾಲಕನ ಬಳಿ ನಗದು ಹಣ ಇಲ್ಲದ ಹಿನ್ನೆಲೆ ಗೂಗಲ್ ಪೇ ಮುಖಾಂತರ ಆರೋಪಿಗಳು ಹಣ ಪಡೆದಿದ್ದಾರೆ.
ಸಂದೀಪ್ ರಾಠೋಡ್ ಎಂಬ ಲಾರಿ ಚಾಲಕನಿಂದ ಬರೋಬ್ಬರಿ ಮೂರುವರೆ ಲಕ್ಷ ಹಣ ವಸೂಲಿ ಮಾಡಿದ್ದರು. ಈ ಬಗ್ಗೆ ಸಂದೀಪ್ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಗಿರೀಶ್ ತುಂಬಗಿ, ಗುಂಡು ಗುತ್ತೆದಾರ್ ಹಾಗೂ ರವಿಚಂದ್ರ್ ಗುತ್ತೆದಾರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3.50 ಲಕ್ಷ ಹಣ ವಸೂಲಿ ಮಾಡಿದ್ದಾರೆ.
ಲಾರಿ ಚಾಲಕನನ್ನ ಹೊಡೆದು ಮೊದಲು ಐದು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ತಂಡ, ಕೊನೆಗೆ ಮೂರುವರೆ ಲಕ್ಷಕ್ಕೆ ಮುಗಿಸಿಕೊಂಡು ಹಣವನ್ನ ಗೂಗಲ್ ಪೇ ಮೂಲಕ ತಮ್ಮ ಅಕೌಂಟ್ ಗೆ ಹಾಕಿಸಿಕೊಂಡು, ಇದೀಗ ಕಂಬಿ ಹಿಂದೆ ಹೋಗಿದ್ದಾರೆ.