ಹೋಳಿ-ರಂಗಪಂಚಮಿ: ಮದ್ಯ ಮಾರಾಟ ನಿಷೇಧ- ಹುಬ್ಬಳ್ಳಿಯ ಕೆಲವೆಡೆ ನಿಷೇಧಾಜ್ಞೆ ಜಾರಿ…

ಹುಬ್ಬಳ್ಳಿ: ಹೋಳಿ ಹಬ್ಬ ಹಾಗೂ ರಂಗ ಪಂಚಮಿ ಆಚರಣೆ ಸಂದರ್ಭದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ, ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಮದ್ಯ ಮಾರಾಟ ಬಂದ್ ಮಾಡಿ, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೊರಡಿಸಿ ಪೊಲೀಸ್ ಆಯುಕ್ತ ಲಾಭೂರಾಮ್ ಆದೇಶ ಹೊರಡಿಸಿದ್ದಾರೆ.

ಧಾರವಾಡದಲ್ಲಿ ಮಾರ್ಚ್ 18 ಸಂಜೆ 6 ಗಂಟೆಯಿಂದ ಮಾರ್ಚ್ 20 ಬೆಳಿಗ್ಗೆ 6 ಗಂಟೆವೆರೆಗೆ, ಹಾಗೂ ಹುಬ್ಬಳ್ಳಿಯಲ್ಲಿ ಮಾರ್ಚ್ 21 ಸಂಜೆ 6 ಗಂಟೆಯಿಂದ ಮಾರ್ಚ್ 23 ಬೆಳಿಗ್ಗೆ 6 ಗಂಟೆವರೆಗೆ ಸಂಪೂರ್ಣವಾಗಿ ಮದ್ಯ ತಯಾರಿಕೆ, ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಿಲಾಗಿದೆ. ಕ್ಲಬ್, ಹೊಟೇಲ್, ಬಾರ್, ಕೆಎಸ್ ಬಿಸಿಎಲ್ ಡಿಪೋ ಹಾಗೂ ಹೋಟೆಲ್‌ಗಳಲ್ಲಿರುವ ಬಾರ್‌ಗಳನ್ನು ಬಂದ್ ಮಾಡಬೇಕು. ಆದೇಶ ಉಲಂಘನೆ ಮಾಡುವವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು.
ಮಾರ್ಚ್ 22 ರಂದು ರಂಗಪಂಚಮಿ ಅಂಗವಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರಿಗೆ, ಹುಬ್ಬಳ್ಳಿಯ ಕಮರಿಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಅತಿಸೊಕ್ಷ್ಮ ಪ್ರದೇಶಗಳಾದ ಕಾಳಮ್ಮನ ಅಗಸಿ, ಡಾಕಪ್ಪ ಸರ್ಕಲ್, ಕೌಲಪೇಟ ಕ್ರಾಸ್, ಹಳೇ ಕೆ.ಇ.ಬಿ.ಆಫೀಸ್ ಸ್ಥಳಗಳಲ್ಲಿ ಸಿ.ಆರ್.ಪಿ.ಸಿ ಕಲಂ 20 ಮತ್ತು 144 ರಡಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ 5 ಕ್ಕಿಂತ ಹೆ್ಚಚ್ಚು ಜನರು ಗುಂಪು ಕೂಡುವುದು, ಮೆರವಣಿಗೆ, ರ್ಯಾಲಿ, ಧ್ವನಿವರ್ಧಕ, ಬ್ಯಾನರ್, ಆಯುಧಗಳನ್ನು ಹಿಡಿದು ತಿರುಗಾಡುವುದು, ಬಲವಂತವಾಗಿ ಬಣ್ಣ ಎರೆಚುವುದನ್ನು ನಿರ್ಬಂಧಿಸಲಾಗಿದೆ. ಶಾಂತಿ ಕದಡುವ ಹಾಗೂ ಗಲಭೆ ಕಾರಣವಾಗುವವರ ವಿರುದ್ಧ ಐ.ಪಿ.ಸಿ ಪ್ರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪೊಲೀಸ್ ಆಯುಕ್ತ ಲಾಭುರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.