“ನಾಡಿದ್ದಿನಿಂದ ಮೂರ್ ದಿನಾ” ಧಾರವಾಡ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಗುರುದತ್ ಹೆಗಡೆ
1 min readಜು.28 ರಂದು ಮೊಹರಂ ಆಚರಣೆ ನಿಮಿತ್ಯ
ಜಿಲ್ಲೆಯಾದ್ಯಂತ ಮದ್ಯಪಾನ, ಮಧ್ಯ ಮಾರಾಟ, ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಧಾರವಾಡ: ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜು.28 ರಿಂದ ಜು.31 ರವರೆಗೆ ಮದ್ಯಪಾನ ಮತ್ತು ಮಧ್ಯ ಮಾರಾಟವನ್ನು ಹಾಗೂ ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶಿಸಿದ್ದಾರೆ.
ಧಾರವಾಡ ಗ್ರಾಮೀಣ, ಹುಬ್ಬಳ್ಳಿ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ ತಾಲೂಕಗಳಲ್ಲಿ ಜುಲೈ 28 ರ ಸಂಜೆ 6 ಗಂಟೆಯಿಂದ ಜುಲೈ 30 ರ ಸಂಜೆ 6 ಗಂಟೆಯವರೆಗೆ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ಅರಳಿ ಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ ಜು.29 ರಂದು ಸಂಜೆ 6 ಗಂಟೆಯಿಂದ ಜು.31 ರ ಬೆಳಗಿನ 6 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶ ಜಾರಿ ಇರುವ ಸಮಯದಲ್ಲಿ ಯಾವತ್ತೂ ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬೀರ ಬಾರ್‍ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಿರತಕ್ಕದ್ದು. ಅಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಅಬಕಾರಿ ಇನ್ಸ್ ಪೆಕ್ಟರ್, ಉಪವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (2) ರನ್ವಯ ಅವಶ್ಯಕತೆ ಕಂಡುಬಂದಲ್ಲಿ ಶಾಂತಿಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಧಾರವಾಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಮತ್ತು ಆರಕ್ಷಕ ಅಧೀಕ್ಷಕರು ಹಾಗೂ ಹೆಚ್ಚುವರಿ ಆರಕ್ಷಕ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಿರ್ದೇಶಿಸಿದ್ದಾರೆ.