ಅಣ್ಣಿಗೇರಿ ಬಳಿ ಭೀಕರ ಅಪಘಾತ: ಗದಗಿನ ವ್ಯಕ್ತಿ ಸಾವು- ಮತ್ತಿಬ್ಬರಿಗೆ ಗಾಯ…!
ಅಣ್ಣಿಗೇರಿ: ಪಟ್ಟಣದ ಹೊರವಲಯದ ಕೊಂಡಿಕೊಪ್ಪ ಬ್ರಿಡ್ಜ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗದಗ ಮೂಲದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಗದಗಿನ ಹಾತಲಗೇರಿ ನಿವಾಸಿ ವಿಠೋಬಾ ಹನಮಪ್ಪ ಹೂವಣ್ಣನವರ ಎಂಬುವವರು ಗದಗ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿಯೇ ಸಾವಿಗೀಡಾಗಿದ್ದು, ಇನ್ನೊಂದು ಕಾರಿನಲ್ಲಿದ್ದ ಚಾಲಕ ಶ್ರೀನಿವಾಸ ವೆಂಕಟೇಶ ನಾಯ್ಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವಿರುಪಾಕ್ಷಿ ಎಂಬಾತನಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ.
ಅತಿ ವೇಗವಾಗಿ ಕಾರುಗಳು ಬರುತ್ತಿದ್ದ ಸಮಯದಲ್ಲಿ ಡಿಕ್ಕಿ ಸಂಭವಿಸಿದ್ದರಿಂದ, ಕಾರೊಂದು ಪಲ್ಟಿಯಾಗಿದ್ದು, ಮತ್ತೊಂದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆಯನ್ನ ನಡೆಸಿದ್ದಲ್ಲದೇ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.