Posts Slider

Karnataka Voice

Latest Kannada News

“ಎ ಮುರಿಗೆಪ್ಪ ದತ್ತಿ” ಅಹಿಂಸೆ ಪ್ರತಿಪಾದಕರ ಸಮ್ಮಿಲನ- ಸಾಕ್ಷಿಯಾದ ಕವಿ ಸಂಘ…

1 min read
Spread the love

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಎಂದರೆ ಒಂದು ವಿಶ್ವವಿದ್ಯಾಲಯವಿದ್ದಂತೆ, ಈ ವಿಶ್ವವಿದ್ಯಾಲಯದ ಸಂಪರ್ಕಕ್ಕೆ ನಾವೆಲ್ಲಾ ಬಂದಿರುವುದು ನಮ್ಮ ಭಾಗ್ಯ ಎಂದು ಧಾರವಾಡ ಕ.ವಿ.ವಿ.ಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ವೀಡಿಯೋ..

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಎ. ಮುರಿಗೆಪ್ಪ ದತ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ದತ್ತಿ ಉದ್ಘಾಟಿಸಿ ಮಾತನಾಡಿದ ಅವರು, 141 ಕ್ಕೂ ಹೆಚ್ಚು ದತ್ತಿ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಆ ದತ್ತಿಗಳಲ್ಲಿ ಎ. ಮುರಿಗೆಪ್ಪ ಅವರ ದತ್ತಿಯು ಸೇರಿದುದು ಹೆಮ್ಮೆಯ ಸಂಗತಿ. ಸಂಘದ ಕಾರ್ಯಕ್ರಮದ ಸಮಯ ಪ್ರಜ್ಞೆ ಇಂದಿನ ಎಲ್ಲ ಸಂಸ್ಥೆಗಳಿಗೂ ಮಾದರಿ. ಎ. ಮುರಿಗೆಪ್ಪ ಅವರು ಸರಳ ಸಜ್ಜನಿಕೆಯಿಂದ, ವಿನಯ ಹಾಗೂ ನಗುಮೊಗದಿಂದ ತಾಳ್ಮೆಯಿಂದ ವ್ಯವಹರಿಸುವ ಪರಿ ಎಲ್ಲರನ್ನು ಆಕರ್ಷಿಸುತ್ತದೆ. ಸಮಾಜಕ್ಕೆ ಸಾಹಿತ್ಯಿಕವಾಗಿ ಅವರದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂಥವರ ದತ್ತಿ ಉದ್ಘಾಟನೆ ನನ್ನಿಂದ ಆದದ್ದು ಸಂತಸ ತಂದಿದೆ ಎಂದರು.

ಧಾರವಾಡ ಆಕಾಶವಾಣಿ ಕೇಂದ್ರದ ಡಾ. ಶಶಿಧರ ನರೇಂದ್ರ ‘ರಂಗಭೂಮಿ ಚಟುವಟಿಕೆಗಳು ಮತ್ತು ಪ್ರೊ. ಎ. ಮುರಿಗೆಪ್ಪ’ ವಿಷಯ ಕುರಿತು ಮಾತನಾಡುತ್ತಾ, 80ರ ದಶಕದಲ್ಲಿಯೇ ರಂಗಭೂಮಿಯ ಸಂಘಟಕರಾಗಿ, ನಟರಾಗಿ, ನಿರ್ದೇಶಕರಾಗಿ, ರಂಗ ತಂತ್ರಜ್ಞರಾಗಿ ಧಾರವಾಡದಲ್ಲಿ ರಂಗಭೂಮಿ ಕುರಿತಾಗಿ ಸಾಕಷ್ಟು ಕೆಲಸ ಮಾಡುವುದರ ಜೊತೆಗೆ ಅನೇಕ ಅತ್ಯುತ್ತಮ ನಾಟಕಗಳನ್ನು ರಂಗಕ್ಕೆ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಂದಿನ ಯುವಕರಾದ ನಾವೆಲ್ಲರೂ ರಂಗಭೂಮಿಯತ್ತ ಒಲವು ಮೂಡುವಲ್ಲಿ ಎ. ಮುರಿಗೆಪ್ಪ ಅವರು ದಾರಿದೀಪವಾಗಿದ್ದರು. ಸಂಘದಲ್ಲಿಟ್ಟಿರುವ ದತ್ತಿಯ ಮೂಲಕ ಸಾಂಸ್ಕೃತಿಕವಾಗಿ ಪ್ರಾಯೋಗಿಕವಾದ ಕಾರ್ಯಕ್ರಮ ಜರುಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ದತ್ತಿಗಳಲ್ಲಿ ಎ. ಮುರಿಗೆಪ್ಪ ದತ್ತಿ ಸೇರಿದ್ದು ಅಭಿನಂದನೀಯ. ಸಂಘದ ಮೇಲಿನ ಅವರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಎ. ಮುರಿಗೆಪ್ಪ ಅವರ ವಿರಚಿತ ‘ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹದೇವ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎ. ಮುರಿಗೆಪ್ಪ ಕುಟುಂಬಸ್ಥರು ಕರ್ನಾಟಕ ವಿದ್ಯಾವರ್ಧಕ ಸಂಘದ ಸಿಬ್ಬಂದಿಗಳನ್ನು ಸನ್ಮಾನಿಸಿ, ಗೌರವಿಸಿದರು. ವೇದಿಕೆಯಲ್ಲಿ ಪ್ರೊ. ಎ. ಮುರಿಗೆಪ್ಪ ಮತ್ತು ಲೀಲಾ ಮುರಿಗೆಪ್ಪ ದಂಪತಿಗಳು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕ ಹಾಗೂ ಸಂಘದ ಗೌರವ ಉಪಾಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಇವರಿಗೆ ಗುರುಪ್ರಸಾದ ಹೆಗಡೆ ಹರ‍್ಮೋನಿಯಂ, ತಬಲಾದಲ್ಲಿ ಶ್ರೀಧರ ಮಾಂಡ್ರೆ, ತಂಬೂರಿಯಲ್ಲಿ ಐಶ್ವರ್ಯ ದೇಸಾಯಿ ಮತ್ತು ಸತೀಶ ಸಾಥ್ ನೀಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.

ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಹೂವಿನಹಡಗಲಿಯ ಗವಿಸಿದ್ಧೇಶ್ವರ ಮಠದ ಶ್ರೀ ಮ.ನಿ.ಪ್ರ. ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಡಾ. ಬಸವರಾಜ ಡೋಣೂರ, ಡಾ. ವೀರಣ್ಣ ರಾಜೂರ, ಡಾ. ಡಿ.ಎಂ. ಹಿರೇಮಠ, ಡಾ. ಬಾಳಪ್ಪಾ ಚಿನಗುಡಿ, ಪ್ರೊ. ಮಲ್ಲಿಕಾರ್ಜುನ ಮೇಟಿ, ಡಾ. ಮಹೇಂದ್ರ ಹರಿಹರ, ಪ್ರೊ.ಕೆ ಅನಬನ್, ರಾಜೇಶ್ವರಿ ಮಹೇಶ್ವರಯ್ಯ, ಸುಜಾತಾ ಕಮ್ಮಾರ, ಡಾ. ಶಿವಾನಂದ ಶೆಟ್ಟರ, ಸುಮಂಗಲಾ ಮರಡಿ, ನಿಂಗಣ್ಣ ಕುಂಟಿ, ಸಂಕಮ್ಮ ಸಂಕಣ್ಣವರ, ಸುಜಾತಾ ಹಡಗಲಿ, ಸಿ.ಎಸ್. ಮಾಳವಾಡ, ಬಿ. ಮಾರುತಿ, ಬಸವರಾಜ ನೆಲವಗಿ, ಡಾ. ಜೆ. ಎಂ. ನಾಗಯ್ಯಾ, ಉದಯ ದೇಸಾಯಿ, ಜಿ.ಬಿ. ಹೊಂಬಳ, ಪ್ರೊ. ಜೆ. ರಾಮಸ್ವಾಮಿ, ಡಾ ಗಣೇಶ ಅಳವಂಡಿ, ಡಾ.ಸಹನಾ ಗಣೇಶ್, ಸುರೇಶ ಹಿರೇಮಠ ಸೇರಿದಂತೆ ಪ್ರೊ. ಅಂಕದ ಮುರಿಗೆಪ್ಪ ಪರಿವಾರದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed