ಶಿಕ್ಷಕರ ಪತ್ನಿಯನ್ನ ಸೋಲಿಸಿದ ಶಿಕ್ಷಕರ ಪತ್ನಿ: ಅಕ್ಕನಿಗೆ ಕೊಕ್ ಕೊಟ್ಟ ತಂಗಿ
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಶಿಕ್ಷಕ ಸಹೋದರರ ಪತ್ನಿಯರ ಚುನಾವಣೆಯಲ್ಲಿ ಅಕ್ಕ ಸೋತಿದ್ದು, ತಂಗಿ ಗೆದ್ದು ಬೀಗಿದ್ದಾರೆ. ಇದರಿಂದ ಶಿಕ್ಷಕ ಅಣ್ಣನ ಮಡದಿಯ ಬದಲಾಗಿ ಶಿಕ್ಷಕ ತಮ್ಮನ ಮಡದಿ ಗ್ರಾಮ ಪಂಚಾಯತಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದ ವೀಣಾ ಅಜಿತ ದೇಸಾಯಿ ಅವರನ್ನ ಅಜಿತ ದೇಸಾಯಿಯವರ ತಮ್ಮ ತವನಪ್ಪ ಅವರ ಮಡದಿ ಪದ್ಮಾವತಿ ದೇಸಾಯಿ ಪರಾಜಿತಗೊಳಿಸಿದ್ದಾರೆ. ಈ ಮೂಲಕ ರಾಜಕೀಯದ ಗಂಧ ಗಾಳಿಯೂ ಗೊತ್ತಿಲ್ಲದ ಮಹಿಳೆಯೋರ್ವರು ಪಂಚಾಯತಿಗೆ ಪ್ರವೇಶ ಪಡೆದಾಗಿದೆ.
ದೇಸಾಯಿ ಕುಟುಂಬದಲ್ಲಿ ರಾಜಕಾರಣವಿತ್ತಾದರೂ ಅದು ಬೇರೆ ಬೇರೆಯಾಗಿರಲಿಲ್ಲ. ಮೊದಲ ಬಾರಿಗೆ ಸಹೋದರರ ಪತ್ನಿಯರೇ ಅಖಾಡಾದಲ್ಲಿ ಧುಮಕಿದ್ದರು. ಕೊನೆಯಲ್ಲಿ ಹಳಬರಿಗೆ ಸೋಲಾಗಿದ್ದು, ಹೊಸಬರಿಗೆ ಮತದಾರ ಪ್ರಭು ಮಣೆ ಹಾಕಿದ್ದಾನೆ.
ಶಿಕ್ಷಕ ವೃತ್ತಿಯಲ್ಲಿರುವ ಅಜಿತ ದೇಸಾಯಿ ಧಾರವಾಡ ತಾಲೂಕಿನ ಮಾರಡಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಸಹೋದರ ಕೂಡಾ ಅಮ್ಮಿನಬಾಯಿಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದಾರೆಂದು ಗೊತ್ತಾಗಿದೆ.