Exclusive- ಒಂದೇ ನಂಬರ ಎರಡು ಅಂಬ್ಯುಲೆನ್ಸ್: ಕೊರೋನಾಗಾಗಿಯೇ ದಂಧಾ ಹೈ ದಂಧಾ..
ಮೈಸೂರು: ಕೊರೋನಾ ಸೋಂಕಿತರ ಸಾಗಾಟಗಾಗಿ ಏನೆಲ್ಲಾ ಅಕ್ರಮಗಳು ನಡೆಯುತ್ತಿದೆ ಎಂಬುದಕ್ಕೆ ಪ್ರಕರಣವೊಂದು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ಯಾವುದೇ ಪರಿಕರಗಳಿಲ್ಲದ ಒಂದು ಅಂಬ್ಯುಲೆನ್ಸ್ ಹಾಗೂ ವ್ಯವಸ್ಥಿತ ಅಂಬ್ಯುಲೆನ್ಸ್ ಎರಡು ವಾಹನಗಳದ್ದು ಒಂದೇ ಸಂಖ್ಯೆ. ಹೇಗೆ ನಡೆಯುತ್ತಿದೆ ಕರಾಮತ್ತು ಅಂತೀರಾ.. ಈ ವರದಿಯನ್ನ ಪೂರ್ಣವಾಗಿ ಓದಿ.
ಅಂಬುಲೆನ್ಸ್ ಗುತ್ತಿಗೆಯಲ್ಲಿ ಅಕ್ರಮ ಬಯಲಾಗಿದೆ. ಒಂದೇ ಸಂಖ್ಯೆಯ ಎರಡು ಅಂಬುಲೆನ್ಸ್ ಗಳು ಪತ್ತೆಯಾಗುವ ಮೂಲಕ ಹಣವನ್ನ ಹೇಗೆ ಕೊಳ್ಳೆ ಹೊಡೆಯಲಾಗುತ್ತಿದೆ ಎಂಬುದು ಕೂಡಾ ತಿಳಿಯುತ್ತಿದೆ.
ಮೈಸೂರಿನ ಪ್ರತಿಷ್ಠಿತ ಸೇಫ್ ವೀಲ್ ಟ್ರಾವೆಲ್ಸ್ ಗೆ ಸೇರಿದ ಎರಡು ಅಂಬುಲೆನ್ಸ್ ವಾಹನಗಳು ಕೂಡಾ ಕೆಎ 03-ಡಿ 399 ಒಂದೇ ಸಂಖ್ಯೆಯನ್ನ ಹೊಂದಿವೆ. ಈ ಎರಡು ವಾಹನಗಳಿಂದಲೇ ಕೊರೋನಾ ಸೋಂಕಿತರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ.
ಈ ಅಂಬುಲೆನ್ಸ್ ವಾಹನಗಳಲ್ಲಿ ವೈದ್ಯಕೀಯ ಸೌಲಭ್ಯವೂ ಇಲ್ಲದಿರುವುದರಿಂದ ಸೇಫ್ ವೀಲ್ ಸಂಸ್ಥೆಗೆ ನೊಟೀಸ್ ಜಾರಿ ಮಾಡಲಾಗಿದ್ದು, ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಆರ್.ಟಿ.ಓ ಅಧಿಕಾರಿಗಳ ಸಿದ್ದತೆ ನಡೆಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಪ್ರದೀಪ್ ದೂರಿನ ಮೇರೆಗೆ ಆರ್.ಟಿ.ಓ ಅಧಿಕಾರಿಗಳ ಕ್ರಮ ತೆಗೆದುಕೊಂಡಿದ್ದು, ಹೆಸರಿಗೆ ಮಾತ್ರ ಅಂಬುಲೆನ್ಸ್, ಅಸಲಿಗೆ ಸುಸ್ಥಿತಿ ಸರ್ಟಿಫಿಕೇಟೇ ಇಲ್ಲ. ಅಂಬುಲೆನ್ಸ್ ವಾಹನಗಳ ದಾಖಲೆಗಳೇ ಬೇರೆ, ಚೆಸ್ಸಿ ನಂಬರಗಳೇ ಬೇರೆಯಾಗಿವೆ. ಹೀಗಾಗಿ ಒಂದಕ್ಕೊಂದು ದಾಖಲೆಗಳೇ ತಾಳೆಯಾಗದೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಅಂಬುಲೆನ್ಸ್ ಗುತ್ತಿಗೆದಾರರ ಜೊತೆ ನಗರಪಾಲಿಕೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯಿದ್ದು, ಒಂದೇ ಸಂಖ್ಯೆಯ ಎರಡು ಅಂಬುಲೆನ್ಸ್ ಗಳನ್ನು ಆರ್.ಟಿ.ಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ಇಂತಹದ್ದೇ ಅಂಬುಲೆನ್ಸ್ ಗಳೇ ಓಡಾಡುತ್ತಿರೋ ಶಂಕೆ ವ್ಯಕ್ತವಾಗಿದ್ದು, ನಗರದಲ್ಲಿರೋ ಎಲ್ಲಾ ಅಂಬುಲೆನ್ಸ್ ಗಳ ದಾಖಲೆ ಪರಿಶೀಲಿಸಿದ್ರೆ ಎಲ್ಲವೂ ಬಯಲಾಗುವ ಸಾಧ್ಯತೆಯಿದೆ. ಕೊರೋನಾ ಸೋಂಕಿತರ ಸೇವೆ ಹೆಸರಲ್ಲಿ ಖಾಸಗಿ ಸಂಸ್ಥೆಗಳು ಹಣ ಲೂಟಿ ಮಾಡ್ತಿರೋದು ಈ ಮೂಲಕ ಬಯಲಾಗಿದೆ.