ಈ ಊರಿನ ಜಾತ್ರೆಗೆ ಹೋದವರಿಗೆ 500-ಕರೆದುಕೊಂಡವರಿಗೆ 1000 ದಂಡ: ಕೊರೋನಾ ತಡೆಯಲು ದಂಡಂ ದಶಗುಣಂ
ನವಲಗುಂದ: ಪ್ರತಿದಿನ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ತಡೆಯಲು ತಾಲೂಕಿನ ಅಮರಗೋಳದ ಜನತೆ ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಂಡಿದ್ದು, ಗ್ರಾಮದಲ್ಲಿ ನಡೆಯುವ ನಾಗದೇವರ ಜಾತ್ರೆಯನ್ನ ನಿಷೇಧ ಮಾಡಿದೆ. ಅಷ್ಟೇ ಅಲ್ಲ, ದಂಡದ ಹೊಸ ರೂಪವನ್ನ ಸೃಷ್ಟಿಸಿದ್ದಾರೆ. ಅದೇನಂತೀರಾ ಪೂರ್ತಿ ವರದಿ ಓದಿ.
ಅಮರಗೋಳ ಗ್ರಾಮ ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರ ಸ್ವಂತೂರು. ಅಲ್ಲಿಯೇ ಈಗ ವಿಶೇಷ ನಿರ್ಧಾರ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ನಾಗ ಪಂಚಮಿಯ ದಿನದಂದು ನಡೆಯುವ ಜಾತ್ರೆಗೆ ಪರವೂರಿಂದ ಯಾರಾದರೂ ಬಂದರೇ ಅವರಿಗೆ ಐದು ನೂರು ರೂಪಾಯಿ ದಂಡ ಹಾಕಲು ಹಾಗೂ ಯಾರಾದರೂ ಕರೆಸಿಕೊಂಡರೇ ಅವರಿಗೆ ಒಂದು ಸಾವಿರ ರೂಪಾಯಿ ದಂಡವನ್ನ ಹಾಕಲು ತೀರ್ಮಾನ ಮಾಡಲಾಗಿದೆ.
ಈ ಸಂಬಂಧ ಗ್ರಾಮಸ್ಥರೇ ತೀರ್ಮಾನ ತೆಗೆದುಕೊಂಡು ಅಕ್ಕಪಕ್ಕದ ಊರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಸಿದ್ಧ ಜಾತ್ರೆಯನ್ನ ರದ್ದು ಮಾಡುವುದಲ್ಲದೇ ಬಂದ ಬೀಗರಿಗೂ, ಕರೆಸಿಕೊಂಡವರಿಗೂ ದಂಡದ ಎಚ್ಚರಿಕೆ ನೀಡಿ ಕೊರೋನಾ ತಡೆಯಲು ತೆಗೆದುಕೊಂಡ ತೀರ್ಮಾನ ವಿಶೇಷವೆನಿಸಿದೆ.
ಗ್ರಾಮಸ್ಥರೇ ಮುಂದಾಗಿ ಗ್ರಾಮದ ಜನರ ಸ್ವಾಸ್ಥ್ಯ ಕಾಪಾಡಲು ಮುಂದಾಗಿದ್ದು ಶ್ಲಾಘನೀಯ.