ಅಲ್ತಾಫ್ ಹಳ್ಳೂರ ಬದಲಾಯಿಸಲು ತೆರೆಮರೆಯಲ್ಲಿ ಕಸರತ್ತು..?
1 min readಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಮಾಜಿ ಉಪಮಹಾಪೌರ ಅಲ್ತಾಫ್ ಹಳ್ಳೂರ ಅವರನ್ನು ಕೆಳಗಿಳಿಸುವ ಪ್ರಯತ್ನ ಬಹಳ ರಭಸದಿಂದ ನಡೆಯುತ್ತಿದೆ ಎಂಬ ಮಾತು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರಲು ಆರಂಭಿಸಿದೆ.
ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಹೇಳುವ ಮೂಲಕ ಈ ಹಿಂದೊಮ್ಮೆ ಎದ್ದ ಚರ್ಚೆಗೆ ಸ್ವತಃ ಹಳ್ಳೂರ ವಿರಾಮ ನೀಡಿದ್ದರು. ಆದರೆ, ಈಗ ರಾಜ್ಯದ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಮಂತ್ರಿಯೋರ್ವರ ನಿಕಟವರ್ತಿ ಎಂದು ಹೇಳಿಕೊಳ್ಳುವ ವ್ಯಕ್ತಿ ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವುದು ಮುಸ್ಲಿಂ ಮುಖಂಡರಲ್ಲಿ ತಳಮಳವುಂಟು ಮಾಡಿದೆ.
ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಈ ಮುಖಂಡ, ಇತ್ತೀಚೆಗೆ ಮಾಜಿ ಕೇಂದ್ರ ಮಂತ್ರಿ ಇಬ್ರಾಹಿಂ ಸಾಹೇಬರೊಂದಿಗೆ ಎರಡು-ಮೂರು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಈಗ ಅಹ್ಮದ ಪಟೇಲ್ ನಿಧನದ ನಂತರ, ಸ್ಥಳೀಯ ಶಾಸಕರಿಗೆ 2-3 ಬಾರಿ ಭೇಟಿಯಾಗಿ ಶಾಸಕರ ‘ಆಯ್ಕೆ’ ‘Choice’ ಆಗಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ, ಈ ಹುದ್ದೆ ಹಳ್ಳೂರ ಅವರಿಂದ ತೆರವು ಆದ ಮೇಲೆ ತಾವು ಆ ಹುದ್ದೆ ಅಲಂಕರಿಸಬೇಕೆಂದು ಕಾಯುತ್ತಿರುವ ಮುಸ್ಲಿಂ ಸಮಾಜದ ಮುಖಂಡರಾದ ಹು-ಧಾ ನಗರಾಭಿವೃದ್ದಿ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಫಿ ಮುದ್ದೇಬಿಹಾಳ, ಮಾಜಿ ಮಹಾಪೌರ ಫಿರ್ದೋಸ್ ಕೊಣ್ಣೂರ ಅವರ ಸಹೋದರ ಪರ್ವೇಜ್ ಕೊಣ್ಣೂರ, ಧಾರವಾಡದ ಇಸ್ಮಾಯಿಲ್ ತಮಟಗಾರ, ಮಾಜಿ ಸಚಿವ ಎ ಎಂ ಹಿಂಡಸಗೇರಿ ಅವರ ಪುತ್ರ ಹಾಜಿ ಹಿಂಡಸಗೇರಿ ಅವರು ಏಕಾಏಕಿ ಪ್ರತ್ಯಕ್ಷಗೊಂಡು ದೆಹಲಿವರೆಗೆ ಲಾಬಿ ಮಾಡುತ್ತಿರುವ ಹಾಗೂ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯೂ ಆಗಿರುವ ನಾಯಕನ ಹೆಸರು ಕೇಳಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಪಕ್ಷದ ಸಂಘಟನೆಗೆ ಸಮಯ ಕೊಟ್ಟಿರುವ ಆಕಾಂಕ್ಷಿಗಳು ಈಗ ಏನೂ ತೋಚದೆ ಸ್ಥಳೀಯ ಶಾಸಕರ ನಡೆಯತ್ತ ದೃಷ್ಠಿ ನೆಟ್ಟಿದ್ದಾರೆ. ಈಗ ಸ್ಥಳೀಯ ಶಾಸಕ ಮಾತ್ರ ಜೇನುಗೂಡಿಗೆ ಕೈ ಹಾಕಿ, ತಮ್ಮ ವಿರುದ್ಧ ಮುಸ್ಲಿಂ ಸಮಾಜದ ಮುಖಂಡರುಗಳು ಗರಂ ಆಗುವಂತ ಸಂದರ್ಭ ತಾವೇ ಅಹ್ವಾನಿಸಿಕೊಂಡಂತಾಗಿದೆ. ಈಗ ಸಧ್ಯ ಕಾಂಗ್ರೆಸ್ ಪಕ್ಷದಲ್ಲಿ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಬದಲಾವಣೆ ಸುದ್ದಿ ಮಾತ್ರ ಸದ್ದಿಲ್ಲದಂತೆ ಭಾರಿ ಚರ್ಚೆ ಆಗುತ್ತಿದೆ.