Posts Slider

Karnataka Voice

Latest Kannada News

ಸಿಸಿಆರ್‌ಬಿಯ ACP ಆರ್‌ಕೆ ಪಾಟೀಲ ನಿವೃತ್ತಿ: ಗೆಳೆಯನ ಕುರಿತು DCP ರವೀಶ್ ಬರಹ…!!!

1 min read
Spread the love

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ ।

ನಿರ್ವಿಕಾರದ ನಯನದಿಂ ನೋಳ್ಪುದಾರಿ ।।

ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ ।

ಉರ್ವರೆಗೆ ಗುರುವವನು – ಮಂಕುತಿಮ್ಮ.

ಊರಿಗೆ ಉಪಕಾರವೆಸಗುವ ಉಪಕಾರಿಯಾದರೂ ತಾನು ಉಪಕಾರ ಮಾಡಿದೆನೆಂದು ಗರ್ವ ಪಡದವನು, ಅಧಿಕಾರಿಯಾಗಿದ್ದರೂ ಆತನಲ್ಲಿ ದರ್ಪದ ನಡವಳಿಕೆ ಲವಶೇಷವೂ ಇಲ್ಲದವನು, ಎಲ್ಲಾ ಧರ್ಮಗಳನ್ನು ಆಲಂಗಿಸಿಕೊಂಡು ಮೇಲು ಕೀಳಿಲ್ಲದೆ ಸರ್ವಧರ್ಮದ ಧರ್ಮಾಧಿಕಾರಿಯಾದವನು, ಆತ ಗಳಿಸಿದ್ದು ಶೂನ್ಯವಾಗಿದ್ದರೂ ಆತ ಎಲ್ಲವನ್ನೂ ಮರೆತ ನಿರ್ವಾಣಧಾರಿಯಾಗಿ ನಿರ್ವಾಣ ಸಂಚಾರಿಯಾದವನು. ಇಷ್ಟು ಸಾಕಲ್ಲವೇ ನಮಗೆ ಆತ ಗುರುವಾಗಲು ? ಇದು ಬೇರೆ ಯಾರ ಬಗ್ಗೆಯೂ ಬರೆದುದಲ್ಲ, ಬರೆದಿದ್ದು ಇಂದು ನಿವೃತ್ತಿ ಹೊಂದಿದ ನಮ್ಮ *ಹುಬ್ಬಳ್ಳಿ – ಧಾರವಾಡ*ದ ಸಿಸಿಆರ್‌ಬಿಯ ಎಸಿಪಿಯಾಗಿದ್ದಂತಹ ಶ್ರೀಮಾನ್ ಶ್ರೀ RK ಪಾಟೀಲ್ ರವರ ಬಗ್ಗೆ ಆತನ ಬಗೆಗೆ ಬರೆಯುವುದು ನನಗೊಂದು ಹೆಮ್ಮೆಯೂ ಹೌದು.

ಬೆಳಗಾವಿಯ ರಾಯಭಾಗ ತಾಲ್ಲೂಕಿನ ನರಸಲಾಪುರದಲ್ಲಿಯ ಒಬ್ಬ ಕಂದ, ಕೃಷಿಯಾಧಾರಿತ ಕುಟುಂಬದಿಂದ ಬಂದ ಒಬ್ಬ ಹುಡುಗ 1-2-1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು 29 ವರ್ಷಗಳ ಸುದೀರ್ಘವಾದ ಸೇವೆಯನ್ನು ಇಲಾಖೆಗಿತ್ತ ಮಹಾನ್ ವ್ಯಕ್ತಿತ್ವದ ಸೊಬಗಿನ ಮನವನ್ನು ಹೊಂದಿದ ಮಾನವೀಯತೆಯ ನೆಲವೀಡಿನ ಮನುಷ್ಯ. ಇಂದು ಆತ ನಿವೃತ್ತರಾಗಿ ವಿಶ್ರಾಂತ ಜೀವನಕ್ಕೆ ಅಡಿಯಿಟ್ಟ ಈ ಸಂಧರ್ಭದಲ್ಲಿ ಆತನ ಬಗೆಗೆ ಎರಡು ಮಾತುಗಳನ್ನಾಡಿ ಬರೆಯದೆ ಹೋದರೆ ನನಗೆ ನಾನೇ ಅವಮಾನಿಸಿಕೊಂಡಂತೆ ಎಮಬ ಭಾವದಲ್ಲಿ ಈ ಬರಹ ಬರೆದಿರುವೆ. Really he s deserves. ಹಾಗೆಯೇ ಇತರೆ ಐದು ಜನ ಅಧಿಕಾರಿಗಳು ನಿವೃತ್ತರಾದರು, ಅವರಿಗೂ ಸಹ ನಮ್ಮಯ ಮನದಾಳದ ಶುಭಾಷಯಗಳು.

ನಾನು 1994 ರ ಬ್ಯಾಚಿನ ಅಧಿಕಾರಿ, ಆರ್ ಕೆ ಪಾಟೀಲ್ ನಮ್ಮ ಬ್ಯಾಚಿನ ಕುಲಾಂತರಿ 1996 ಬ್ಯಾಚ್ ನ ಅಧಿಕಾರಿ. ಗ್ರೆಡೇಷನ್ ಎಲ್ಲವೂ ಒಂದೇಯಾಗಿದ್ದರೂ ಸಹ ಆತನಲ್ಲಿ ಒಂದು ದಿನವಾದರೂ ಒಂದು ಕ್ಷಣವಾದರೂ ಸಹ ನನ್ನ ಸೀನಿಯರ್ ಅಧಿಕಾರಿಯೆಂದೇ ಮನದಾಳದಲ್ಲಿ ಪ್ರತಿಷ್ಟಾಪಿಸಿಗೊಂಡ ಶುದ್ದ ಮನಸ್ಥಿತಿಯವ. ಇಲಾಖೆಯ ಶಿಸ್ತಿನಲ್ಲಿ ಒಂದು ದಿನ ಸೀನಿಯರ್ ಆದರೂ ಆತ ಸೀನಿಯರ್ ಎಂಬ ಸತ್ಯವನ್ನು ಕಂಡುಕೊಂಡವನಾಗಿದ್ದವನು. ಆತನ ಕಣಕಣದಲ್ಲೂ ಶಿಸ್ತು ಎಂಬುದು ತುಂಬಿ ತುಳುಕುತ್ತಿತ್ತು. ತನ್ನ ಅಧೀನದ ಸಿಬ್ಬಂಧೀ ತಪ್ಪು ಮಾಡಿದರೂ ನಾನೇ ತಪ್ಪು ಮಾಡಿರುವೆ ಈ ಭಾರಿ ಕ್ಷಮಿಸಿಬಿಡಿ ಎಂದು ಸಿಬ್ಬಂಧಿಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವ್ಯಕ್ತಿ ಆತನಾಗಿದ್ದ.

ಸರ್ವಸಮತಾ ಭಾವಕಿಂತಧಿಕ ತಪವಿಲ್ಲ,
ಕ್ಷಮೆಯ ಮೀರಿಸುವಂತ ಸದ್ಗುಣವು ಬೇರಿಲ್ಲ,
ದುಡಿಮೆಗಿಂತಿರಿದಾದ ದೇವಪೂಜೆಯದಿಲ್ಲ,
ಶ್ರೀನಿಧಿಯ ಒಲುಮೆಗೆ ಮತ್ತೇನೂ ಬೇಕಿಲ್ಲ.

ಎಂಬ ಕವಿವಾಣಿಯಂತೆ ಆತನಲ್ಲಿ ಸರ್ವಸಮತಾಭಾವ, ಕ್ಷಮೆ ಹಾಗೂ ಕಾಯಕತತ್ವ ರಕ್ತಗುಣವಾಗಿದ್ದುದ ಕಂಡು ನಾನೇ ಸೋಜುಗ ಪಟ್ಟಿರುವೆ. ನಮ್ಮ ಹುಬ್ಬಳ್ಳಿ ಧಾರವಾಡದ ಪೊಲೀಸ್ ಕಮೀಷನರ್ ಸಹ RK Patil ಅವರ ಬಗೆಗೆ ತುಂಬು ಮನಸ್ಸು, ಹೃದಯದಿಂದ ಹಾರೈಸುವಾಗ ಅವರ ಕಣ್ಣಂಚಲ್ಲಿ ಕಣ್ಣೀರ ಬಿಂದು ಕಂಡು ನಾನು ಮೂಕಸ್ಮಿತನಾದೆ.

ತಾನು ನಿವೃತ್ತಿ ಹೊಂದುವ ಕೊನೆಯ ದಿನದವರೆಗೂ ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದುಕೊಂಡು ಕೆಲಸ ಮಾಡಿ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ನಿವೃತ್ತಿ ಹೊಂದಿದವರು RK Patil ರವರು. ಅವರಿಗೆ ದೇವರು ಆಯಷ್ಯ, ಆರೋಗ್ಯ ಕೊಡಲೆಂದು ಆ ಸರ್ವಶಕ್ತ ಭಗವಂತನಲ್ಲಿ ನನ್ನಯ ಭಿನ್ನಹವೂ ಇದೆ. ಅವರ ನಡವಳಿಕೆ, ಕಾಯಕತತ್ವ ಎಂಬುದು ಇಂದಿನ ಯುವ ಪೀಳಿಗೆಯ ಅಧಿಕಾರಿಗಳಿಗೆ ದಾರಿ ದೀಪವಾಗಬೇಕು. ಅವರಲ್ಲಿ ನಡೆ, ನುಡಿ, ನೋಟದಲ್ಲಿನ ಹಸನು ನಮಗೆ ಮಾರ್ಗದರ್ಶಿಯಾಗಲೆಂಬ ಹಂಬಲತೆ ನನ್ನದು.

ಕಾಯಕದಲ್ಲಿ ನಿರುತನಾದೊಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು
*ಕಾಯಕವೇ ಕೈಲಾಸ* ವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು

ಎನ್ನುವ ಆಯ್ದಕ್ಕಿ ಮಾರಯ್ಯನ ವಚನದಂತೆ ಕಾಯಕ ಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಂಡ ನಮ್ಮ RK Patil ಅವರ ಜೀವನ ಸುಖ ಶಾಂತಿಯಿಂದ ಕೂಡಿರಲಿ ಎಂಬ ಮಾತು ನನ್ನದಾಗಲಿ, *ಖಾಕಿ ಸಮವಸ್ತ್ರವನ್ನು ತಲೆಯ ಮೇಲೆ ಹೊತ್ತು ಮೆರೆಸುವೆ* ಎನ್ನುವ ಅವರ ಭಾವ ಸತ್ಯಸಾಕ್ಷಿಯಾಗಲಿ ಎಂಬ ಹಾರೈಕೆಯೊಂದಿಗೆ ಅವರಿಗೆ ಆ ಭಗವಂತ ಒಳಿತನೆಸಗಲಿ ಎಂದು ಹಾರೈಸುವೆ.

✍🏻 ರವೀ ಚಿಕ್ಕನಾಯಕನಹಳ್ಳಿ


Spread the love

Leave a Reply

Your email address will not be published. Required fields are marked *