ಹುಬ್ಬಳ್ಳಿ ಪೊಲೀಸರಿಗೆ ಸಾಕ್ಷಿ ನುಡಿದ ಜಾಹೀರಾತು ಫಲಕ…?

ಹುಬ್ಬಳ್ಳಿ: ನಗರದ ಕಿಮ್ಸ ಮುಂಭಾಗದಲ್ಲಿನ ಮಾರವೆಲ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ, ಆಟೋವನ್ನ ಪತ್ತೆ ಹಚ್ಚುವಲ್ಲಿ ಕೊನೆಗೂ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಮಾರವೆಲ್ ವಾಣಿಜ್ಯ ಕಟ್ಟಡದ ಮುಂಭಾಗ ಸ್ಕೂಟರಲ್ಲಿ ಹೋಗುತ್ತಿದ್ದ ಯಲ್ಲಪ್ಪ ನರಗುಂದ ಎನ್ನುವವರಿಗೆ ಅಪಘಾತಪಡಿಸಿ, ಪರಾರಿಯಾಗಿದ್ದ ಆಟೋವನ್ನ ಪತ್ತೆ ಹಚ್ಚಲಾಗಿದೆ.

ಘಟನೆಯಲ್ಲಿ ಆಟೋ ಡಿಕ್ಕಿ ಪಡಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ 52 ವರ್ಷದ ಯಲ್ಲಪ್ಪ, ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾಗಿದ್ದರು. ಆದರೆ, ಡಿಕ್ಕಿ ಹೊಡೆದ ವಾಹನದ ಬಗ್ಗೆ ಪತ್ತೆ ಹಚ್ಚುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಉತ್ತರ ಸಂಚಾರಿ ಠಾಣೆಯ ಪೊಲೀಸರು ಮಾರವೆಲ್ ವಾಣಿಜ್ಯ ಸಂಕೀರ್ಣದ ಅಂಗಡಿಯೊಂದರಿಂದ ಸಿಸಿಟಿವಿ ದೃಶ್ಯಾವಳಿಗಳನ್ನ ಪಡೆದಿದ್ದಾರೆ. ಆಗ ಘಟನೆಯ ನಡೆದ ಬಗ್ಗೆ ಗೊತ್ತಾಗಿದೆ. ಆದರೆ, ಆಟೋದ ನಂಬರ ಕಾಣಿಸದೇ ಇರುವುದು ಮತ್ತಷ್ಟು ತಲೆನೋವನ್ನುಂಟು ಮಾಡಿತ್ತು. ಕೊನೆಗೆ ಆಟೋದ ಡೋರಿಗೆ ಹಾಕಿದ ಜಾಹೀರಾತು ಫಲಕದಿಂದ ಆಟೋ ಪತ್ತೆಯಾಗಿದ್ದು, ಉತ್ತರ ಸಂಚಾರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.