“ಅಗ್ನಿಪಥ್”ನಲ್ಲಿ ಸೇರ್ಪಡೆ: ಕಳಿಸಲು ಹೊರಟಿದ್ದ ಕಾರು ಅಪಘಾತ- “ಮುಲ್ಲಾ ಡಾಬಾ” ಬಳಿ ಐವರ ದುರ್ಮರಣ…
1 min read*ಸೈನ್ಯಕ್ಕೆಂದು ಹೊರಟಿದ್ದವನನ್ನು ಕಳಿಸಲು ಹೋದವರೇ ಮಸಣ ಸೇರಿದರು*
ಧಾರವಾಡ: ತಾನೂ ಕೂಡ ಸೈನ್ಯಕ್ಕೆ ಸೇರಬೇಕು ಎಂದು ನಿತ್ಯ ರನ್ನಿಂಗ್ ಮಾಡಿ ಹಾಗೋ ಹೀಗೋ ಪ್ರಯತ್ನಪಟ್ಟು ಆತ ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಆಯ್ಕೆಯಾಗಿದ್ದ. ಇನ್ನೇನು ಕೆಲಸಕ್ಕೆ ಹಾಜರಾಗಬೇಕಿತ್ತು. ನಾಳೆ ಹುಬ್ಬಳ್ಳಿಯಿಂದ ಹೊರಟು ಆತ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ, ಆತನ ಜೀವನದಲ್ಲಿ ವಿಧಿ ಬೇರೆ ಆಟವನ್ನೇ ಆಡಿಬಿಟ್ಟಿದೆ.
ಹೌದು! ಇದು ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಂಜುನಾಥ ಮುದ್ದೋಜಿ ಎಂಬ ಯುವಕನ ದಾರುಣ ಕಥೆ.
ಮಂಜುನಾಥ ಮೂಲತಃ ಚೆನ್ನಮ್ಮನ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದವನು. ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದ ಈತನನ್ನು ಹುಬ್ಬಳ್ಳಿಗೆ ಬಿಟ್ಟು ಬರಲೆಂದು ಆತನ ಸಂಬಂಧಿಕರು ಖುಷಿಯಿಂದಲೇ ಕಾರು ತೆಗೆದುಕೊಂಡು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದರು. ಆದರೆ, ತೇಗೂರು ಸಮೀಪ ಬರುತ್ತಿದ್ದಂತೆ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಮಹಾರಾಷ್ಟ್ರ ಮೂಲದ ಲಾರಿಗೆ ಈ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿದ್ದ ಮಂಜುನಾಥನ ಸಂಬಂಧಿಕರಾದ ನಾಗಪ್ಪ ಮುದ್ದೋಜಿ, ಮಹಾಂತೇಶ ಮುದ್ದೋಜಿ, ಬಸವರಾಜ ನರಗುಂದ ಸೇರಿದಂತೆ ಇನ್ನೂ ಬದುಕಿ ಬಾಳಬೇಕಿದ್ದ ಐದು ವರ್ಷದ ಶ್ರೀಕುಮಾರ ನರಗುಂದ ಎಂಬ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದಲ್ಲದೇ ರಸ್ತೆ ದಾಟುತ್ತಿದ್ದ ಪಾದಚಾರಿ ಹೆಬ್ಬಳ್ಳಿ ಗ್ರಾಮದ ಈರಣ್ಣ ರಾಮನಗೌಡರ ಎಂಬಾತನಿಗೂ ಈ ಕಾರು ಡಿಕ್ಕಿ ಹೊಡೆದಿದ್ದರಿಂದ ಆತ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಶ್ರವಣಕುಮಾರ ನರಗುಂದ ಎಂಬ ಏಳು ವರ್ಷದ ಬಾಲಕ, ಮಡಿವಾಳಪ್ಪ ಅಳ್ನಾವರ ಎಂಬುವವರೂ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆಂದು ಕಿಮ್ಸ್‌ಗೆ ದಾಖಲಿಸಲಾಗಿದೆ. ಸೈನ್ಯಕ್ಕೆ ಸೇರಬೇಕಿದ್ದ ಮಂಜುನಾಥ ಮುದ್ದೋಜಿ ಹಾಗೂ ಆತನ ಇನ್ನೋರ್ವ ಸಂಬಂಧಿ ಪ್ರಕಾಶಗೌಡ ಪಾಟೀಲ ಅವರಿಗೂ ಗಾಯಗಳಾಗಿದ್ದು, ಅವರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖುಷಿಯಿಂದ ಸೈನ್ಯಕ್ಕೆ ಸೇರಬೇಕಿದ್ದ ಮಂಜುನಾಥನ ಜೀವನದಲ್ಲಿ ಜವರಾಯ ಅಟ್ಟಹಾಸವನ್ನೇ ಮೆರೆದಿದ್ದು, ಆತನ ಸಂಬಂಧಿಗಳು ಇದೀಗ ದಾರುಣವಾಗಿ ಹೆಣವಾಗಿ ಬಿದ್ದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.