ಈ ಎರಡು ಅಪಘಾತದ ದೃಶ್ಯವನ್ನ ನೀವೆಂದೂ ಕಂಡಿರಲೂ ಸಾಧ್ಯವೇಯಿಲ್ಲ- ಮೂರು ಜನ ಸಾವು
ಕಲಬುರಗಿ/ಬಾಗಲಕೋಟೆ: ಎರಡು ಜಿಲ್ಲೆಗಳಲ್ಲಿ ನಡೆದಿರುವ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು, ಎರಡು ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಮಾತ್ರ ವಾಹನಗಳನ್ನ ನೋಡಿದ್ರೇ ನೀವೂ ಬೆಚ್ಚಿಬೀಳಿಸುವಷ್ಟು ತುಂಡು ತುಂಡಾಗಿವೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮುದಬಾಳ.ಕೆ ಕ್ರಾಸ್ ಬಳಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಮಾನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ರೂಪವೇ ಬದಲಿಯಾಗಿದೆ. ದುರ್ಘಟನೆಯಲ್ಲಿ ಅನಿತಾ, ಆಕೆಯ ಪುತ್ರ ಹೇಮಂತ್ ಹಾಗೂ ಚಾಲಕ ರಾಮು ಸಾವಿಗೀಡಾಗಿದ್ದಾರೆ.
ಮೃತರೆಲ್ಲರೂ ಸುರಪುರ ಪಟ್ಟಣಕ್ಕೆ ಸೇರಿದವರಾಗಿದ್ದು, ಸುರಪುರದಿಂದ ಕಲಬುರ್ಗಿಗೆ ಬಿ.ಎಸ್ಸಿ ಪ್ರವೇಶಕ್ಕೆಂದು ದಾಖಲೆಗಳ ಪರಿಶೀಲನೆಗಾಗಿ ತೆರಳುತ್ತಿದ್ದರು. ಬಲಬದಿಯ ಟೈರ್ ಬಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಕಮಾನಿಗೆ ಢಿಕ್ಕಿ ಹೊಡೆದಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಭಾರಿ ವಾಹನಗಳ ಸರಣಿ ಅಪಘಾತ ನಡೆದಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ನಡೆದಿದೆ.
ರಸ್ತೆ ಪಕ್ಕ ನಿಂತ ಒಂದು ಲಾರಿಗೆ ಮೊದಲು ಒಂದು ಲಾರಿ ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಬಂದ ಲಾರಿ, ಕ್ಯಾಂಟರ್ ಡಿಕ್ಕಿ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಓರ್ವ ಲಾರಿ ಚಾಲಕನಿಗೆ ಮಾತ್ರ ಗಾಯವಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅಪಘಾತದಲ್ಲಿ ನಾಲ್ಕು ಲಾರಿ ಎರಡು ಕ್ಯಾಂಟರ್ ನುಜ್ಜು ಗುಜ್ಜು ಆಗಿದ್ದು, ಎರಡು ಲಾರಿಗಳಲ್ಲಿ ಚಂಡು ಹೂವು ತುಂಬಿದ್ದು, ಎರಡು ಲಾರಿಗಳಲ್ಲಿ ಸ್ಲ್ಯಾಗ್ ಲೋಡ್ ಮಾಡಲಾಗಿದೆ. ಇನ್ನು ಕ್ಯಾಂಟರ್ ನಲ್ಲಿ ಕಬ್ಬಿಣದ ಸರಳಿಗಳು ಇದ್ದವು. ಸರಣಿ ಅಪಘಾತದಿಂದ ವಾಹನಗಳು ಅಲ್ಲೊಂದು ಇಲ್ಲೊಂದು ಹೊಲಗಳಲ್ಲಿ ನುಗ್ಗಿವೆ. ಬಾಗಲಕೋಟೆಯಿಂದ ಇಳಕಲ್ ಕಡೆಗೆ ಹೊರಟಿದ್ದ ವಾಹನಗಳು ಢಿಕ್ಕಿ ಹೊಡೆದಿವೆ. ಅಮೀನಗಡ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.