‘ವೀವ್ ಪಾಯಿಂಟ್’ ನೋಡಲು ಹೋದ ಯುವಕನ ಬದುಕು ಅಂತ್ಯ – ವಿಧಿಯ ಆಟಕ್ಕೆ ಮನೀಷ್ ಬಲಿ
ಧಾರವಾಡ: ಹೊಸ ವರ್ಷದ ಸಂಭ್ರಮದ ನಡುವೆ ಅದೆಷ್ಟೋ ಕನಸುಗಳನ್ನು ಹೊತ್ತು ಪ್ರಕೃತಿಯ ಸೌಂದರ್ಯ ಸವಿಯಲು ಹೋದ ಯುವಕನೊಬ್ಬ ಹೆಣವಾಗಿ ಮರಳಿದ್ದಾನೆ.
ಕಲಕೇರಿ ವೀವ್ ಪಾಯಿಂಟ್ ಬಳಿ ಸ್ಕೂಟಿ ಅಪಘಾತದಲ್ಲಿ ಮನೀಷ್ ಗುಡಸಲಮನಿ ಎಂಬುವವರು ಸಾವನ್ನಪ್ಪಿದ್ದು, ಒಂದು ಸುಂದರ ಕುಟುಂಬದ ಆಧಾರಸ್ತಂಭವೇ ಕುಸಿದು ಬಿದ್ದಿದೆ.
https://youtube.com/shorts/IShLQFg0y48?feature=share
ಮನೀಷ್ ಗುಡಸಲಮನಿ ಇಂದು ಬೆಳಿಗ್ಗೆ ಕಲಕೇರಿಯ ಗುಡ್ಡದ ಮೇಲಿರುವ ‘ವೀವ್ ಪಾಯಿಂಟ್’ ವೀಕ್ಷಿಸಲು ತೆರಳಿದ್ದರು. ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಸ್ನೇಹಿತರೊಂದಿಗೆ ಸಂಭ್ರಮಿಸಬೇಕಿದ್ದ ಆ ಕ್ಷಣಗಳು ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿವೆ. ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ, ಮನೀಷ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ.
ಮನೆಯಿಂದ “ಹೋಗಿ ಬರುತ್ತೇನೆ” ಎಂದು ನಗುನಗುತಲೇ ಹೊರಟಿದ್ದ ಮಗ, ಇಂದು ಶವವಾಗಿ ಮನೆಗೆ ಮರಳುತ್ತಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೀಷ್ ಕೇವಲ ಒಬ್ಬ ಯುವಕನಾಗಿರಲಿಲ್ಲ, ತನ್ನ ಮನೆಯವರ ಪಾಲಿನ ಭವಿಷ್ಯದ ಆಶಾಕಿರಣವಾಗಿದ್ದ. ಹಬ್ಬದ ದಿನವೇ ಮನೆಯಲ್ಲಿ ಮಗನ ಸಾವು ಸಂಭವಿಸಿರುವುದು ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ಕಣ್ಣೀರು ತರಿಸಿದೆ.