ಧಾರವಾಡದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಗುತ್ತಿಗೆದಾರ ದುರ್ಮರಣ
ಧಾರವಾಡ: ನಗರದ ಕೆಲಗೇರಿಯಿಂದ ಧಾರವಾಡ ಕಡೆಗೆ ಬರುತ್ತಿದ್ದ ವೇಳೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗುತ್ತಿಗೆದಾರರೋರ್ವರು ಸಾವಿಗೀಡಾದ ಘಟನೆ ಲೋಟಸ್ ನಗರದ ಬಳಿ ಸಂಭವಿಸಿದೆ.
ಸಾಧನಕೇರಿ ಎರಡನೇಯ ಕ್ರಾಸನ ನಿವಾಸಿಯಾಗಿರುವ ಶಿವಾನಂದ ಬಸಪ್ಪ ಯಳವಟ್ಟಿ ಎಂಬುವವರೇ ಸಾವಿಗೀಡಾದ ಗುತ್ತಿಗೆದಾರರು. 51 ವಯಸ್ಸಿನ ಇವರು ಬೈಕಿನಲ್ಲಿ ಬರುತ್ತಿದ್ದ ವೇಳೆಯಲ್ಲಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ಮುನ್ನವೇ ಸಾವಿಗೀಡಾಗಿದ್ದಾರೆ.
ಬೈಕ್ ಸವಾರನ ಲಾರಿಗೆ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಲಾರಿ ಸಮೇತ ಅಲ್ಲಿದ್ದ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಸಂಚಾರಿ ಠಾಣೆಯ ಪೊಲೀಸರು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಬೈಕಿನಲ್ಲಿ ಬರುತ್ತಿದ್ದ ಶಿವಾನಂದ ಅವರಿಗೆ ಮುಂದೆ ಹೆಚ್ಚು ಬೆಳಕು ಕಣ್ಣಿಗೆ ಬಿದ್ದ ಪರಿಣಾಮ ಪಕ್ಕದಲ್ಲಿ ಬೈಕ್ ತಿರುಗಿಸುವ ವೇಳೆ, ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ.