ತಹಶೀಲ್ದಾರ ಹೆಸರಲ್ಲಿ ಲಂಚದ ಬೇಡಿಕೆ: ಎಸಿಬಿಗೆ ಸಿಕ್ಕಿಬಿದ್ದ ಭ್ರಷ್ಟರು
ತುಮಕೂರು: ತಹಶೀಲ್ದಾರ್ ಮೋಹನ್ ಅವರ ಹೆಸರಿನಲ್ಲಿ ರೈತರೊಬ್ಬರಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಬ್ರೋಕರ್ ಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಹರಳೂರು ಗ್ರಾಮದ ಶಿವಕುಮಾರ್ ಮತ್ತು ರುದ್ರಸ್ವಾಮಿ ಬಂಧಿತರಾಗಿದ್ದು, ತುಮಕೂರು ತಾಲ್ಲೂಕಿನ ಕೋರ ಹೋಬಳಿ, ಕರೀಕೆರೆ ಗ್ರಾಮದ ವಾಸಿ ರಂಗನಾಥ್ ಎಂಬುವರ ಜಮೀನಿನ 1-5 ನಮೂನೆ ಭರ್ತಿ ಮಾಡಿ ಕೊಡಲು ಈ ಇಬ್ಬರು ಆರೋಪಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದರು.
ಆರೋಪಿ ಶಿವಕುಮಾರ್ ಎಂಬಾತ ತಾನೇ ತುಮಕೂರು ತಹಶೀಲ್ದಾರ್ ಮೋಹನ್ ಎಂದು ರಂಗನಾಥ್ ಅವರ ಜೊತೆಯಲ್ಲಿ ಮೊಬೈಲ್ ನಲ್ಲಿ ಮಾತನಾಡಿ, 1-5 ನಮೂನೆ ಭರ್ತಿ ಮಾಡಲು ಎಕರೆಗೆ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದನು. ಈ ಬಗ್ಗೆ ರಂಗನಾಥ್ ಎಸಿಬಿಗೆ ದೂರು ಸಲ್ಲಿಸಿದ್ದರು.
ಜುಲೈ 1 ರಂದು ಬೆಳಗ್ಗೆ 8.30 ರ ಸಮಯದಲ್ಲಿ ನಗರದ ಎಸ್.ಎಸ್ ಪುರಂ ಕ್ರಾಸ್, ಉಪ್ಪಾರಹಳ್ಳಿ ಫ್ಲೈ ಓವರ್ ಬಳಿ ಆರೋಪಿ ರುದ್ರಸ್ವಾಮಿ, ಹಣವನ್ನು ಸ್ವೀಕರಿಸುತ್ತಿದ್ದಾಗ ಎಸಿಬಿ ಡಿ.ಎಸ್.ಪಿ ಉಮಾಶಂಕರ್ ನೇತೃತ್ವದಲ್ಲಿ ಟ್ರ್ಯಾಪ್ ನಡೆಸಿ ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಹರಳೂರು ಗ್ರಾಮದ ಬ್ರೋಕರ್, ನಕಲಿ ತಹಶೀಲ್ದಾರ್ ಶಿವಕುಮಾರನನ್ನು ಕೂಡ ಬಂಧಿಸಲಾಗಿದೆ.