ಅಭಿಮಾನ್ ಸ್ಟುಡಿಯೋ ಜಾಗಕ್ಕೆ ಸಂಬಂಧಿಸಿದಂತೆ ಕೆವಿಯೆಟ್ ದಾಖಲಿಸಲು ಡಾ. ವಿಷ್ಣು ಸೇನಾ ಸಮಿತಿ ಒತ್ತಾಯ…

ಅಭಿಮಾನ್ ಸ್ಟುಡಿಯೋವನ್ನು ಸರ್ಕಾರವು ಅರಣ್ಯ ಪ್ರದೇಶವೆಂದು ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿರುವುದು ಸರಿಯಷ್ಟೇ. ಈ ಪ್ರಕ್ರಿಯೆ ಹೊಸದಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ಸರ್ಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ವಾದ ಮಂಡನೆ ಆಗದ ಕಾರಣದಿಂದ ಅಭಿಮಾನ್ ಸ್ಟುಡಿಯೋದ ಮಾಲೀಕರು ಆ ಪ್ರಕ್ರಿಯೆ ವಿರುದ್ಧ ತಡೆಯಾಜ್ಞೆ ತಂದು ಅದನ್ನು ಖಾಸಗಿ ಸ್ವತ್ತು ಎಂದು ಬಿಂಬಿಸಿ ಅವ್ಯವಹಾರ ನಡೆಸುತ್ತಿದ್ದರು. ಈ ಬಾರಿಯೂ ಅದೇ ಮರುಕಳಿಸಬಾರದೆಂದು ಸರ್ಕಾರವನ್ನು ಎಚ್ಚರಿಸಲು ಇಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದ ಈ ಮುಟ್ಟುಗೋಲು ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಉದ್ದೇಶಿಸಿರುವುದರಿಂದ ಕೂಡಲೆ ಕೆವಿಎಟ್ ಅನ್ನು ದಾಖಲಿಸಬೇಕೆಂದು ಕೋರಿದರು. ಜೊತೆಗೆ ಅರಣ್ಯ ಭೂಮಿ ಎಂದು ಘೋಷಿಸಿದ ನಂತರವೂ ಅಲ್ಲಿ ಡಾ. ವಿಷ್ಣುವರ್ಧನ್ ಮತ್ತು ಬಾಲಕೃಷ್ಣ ಅವರ ಪುಣ್ಯಭೂಮಿ ಅಥವಾ ಪರಿಸರ ಸ್ನೇಹಿ ಸ್ಮಾರಕ ನಿರ್ಮಾಣಕ್ಕೆ ಅವಕಾಶವನ್ನು ಕಲ್ಪಿಸಬೇಕೆಂದು ವಿನಂತಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಅಭಿಮಾನ್ ಸ್ಟುಡಿಯೋವನ್ನು ಸರ್ಕಾರ ಅಧೀನಕ್ಕೆ ತೆಗೆದುಕೊಂಡು ಅಲ್ಲಿ ಒಂದು ಜೈವಿಕ ಶ್ವಾಶಕೋಶ ಉದ್ಯಾನವನವನ್ನು ನಿರ್ಮಿಸುವುದಾಗಿಯೂ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗೆ ಸ್ಥಳವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು. ಈ ಸಂದರ್ಭದಲ್ಲಿ ವಿಷ್ಣು ಸೇನಾಸಮಿತಿಯ ಪದಾದಿಕಾರಿಗಳಾದ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.