ಉದ್ಯಮಗಳಿಗೆ ಸರ್ಕಾರದಿಂದ ವಂಚನೆ : ಬೃಹತ್ ಕೈಗಾರಿಕಾ ಸಚಿವರೇ ನಿಮ್ಮ ನಿಲುವೇನು..?

ಹುಬ್ಬಳ್ಳಿ: ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳುತ್ತಲೇ ಕರ್ನಾಟಕ ಕೈಗಾರಿಕಾ ಪ್ರದೇಶ ಮಂಡಳಿ (ಕೆಐಎಡಿಬಿ) ತನ್ನ ಭೂಮಿಯ ದರವನ್ನು ಶೇ 70-75 ರಷ್ಟು ಅಂದರೆ ಎಕರೆಗೆ 35 ಲಕ್ಷ ರೂಪಾಯಿ ಹೆಚ್ಚಿಸಿ ಎಂಎಸ್ ಎಂಇ ಉದ್ಯಮದಾರರಿಗೆ ಸಂಕಷ್ಟಕ್ಕೆ ಒಡ್ಡಿದೆ. ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಹಗಲು ಯೋಜನೆಗಳನ್ನು ಘೋಷಣೆ ಮಾಡಿ ರಾತ್ರಿ ನಿಯಮಗಳನ್ನೇ ಬದಲು ಮಾಡಿಬಿಡುತ್ತಿದೆ. ಇದರಿಂದ ಹೇಳೋದು ಒಂದು ಮಾಡೋದು ಇನ್ನೊಂದು ಎಂಬಂತಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಮಂಡಳಿ (ಕೆಐಎಡಿಬಿ) ತನ್ನ ಭೂಮಿ ಮಾರಾಟದಲ್ಲಿ 70-75% ರಷ್ಟು ಬೆಲೆಯನ್ನು ಹೆಚ್ಚಿಸಿದೆ. ಇದು ರಾಜ್ಯದ ಎಂಎಸ್‌ಎಂಇ ವಲಯಕ್ಕೆ ಆಘಾತಕಾರಿ ವಿಷಯವಾಗಿದೆ. ಮಾನದಂಡಗಳ ಪ್ರಕಾರ, ಹಂಚಿಕೆಯ 10 ವರ್ಷಗಳಲ್ಲಿ ಮಾರಾಟ ಪತ್ರಕ್ಕೆ ಮಂಡಳಿಯು 10-15% ದರವನ್ನು ಹೆಚ್ಚಿಸಬಹುದು. ಸುಪ್ರೀಂ ಕೋರ್ಟ್ ಕೆಐಎಡಿಬಿ ವಿರುದ್ಧದ ಪ್ರಕರಣ ಒಂದರಲ್ಲಿ ಶೇ.10 ರಷ್ಟು ಮಾತ್ರ ಹೆಚ್ಚಿಗೆ ಮಾಡಬಹುದು ಎಂಬ ತೀರ್ಪು ಕೊಟ್ಟಿದೆ. ಆದರೂ ಸಹ ಕೆಐಎಡಿಬಿ ಅಂತಿಮ ಬೆಲೆಯನ್ನು 70-75% ರಷ್ಟು ಹೆಚ್ಚಿಸಿದ್ದು ಖಂಡನೀಯ. ಇನ್ನೂ ಈ ಬಗ್ಗೆ ಪ್ರಮುಖ ಪತ್ರಿಕೆಗಳು ಕೂಡಾ ವರದಿ ಮಾಡಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕೈಗಾರಿಕಾ ಕ್ಷೇತ್ರದಲ್ಲಿ ಶೇ.40 ರಷ್ಟು ಉದ್ಯೋಗಾವಕಾಶ ನೀಡುತ್ತಾ ದೇಶದ ಬೆನ್ನೆಲುಬು ಆಗಿವೆ. ಅಲ್ಲದೇ ಎಂಎಸ್ಎಂಇ ಉದ್ಯಮದಾರರು ಉದ್ಯೋಗ ಪಡೆಯದೇ ಯುವಕರಿಗೆ ಉದ್ಯೋಗದಾತರಾಗಿದ್ದಾರೆ. ಸಣ್ಣ ಉದ್ಯಮದಾರರು ತಮ್ಮ ಜೀವನದ ಉಳಿತಾಯವನ್ನು ಬಂಡವಾಳದ ರೂಪದಲ್ಲಿ ಎಂ ಎಸ್ಎಂಇ ಉದ್ಯಮಕ್ಕೆ ಹೂಡಿರುವ ಕಾರಣ ತಮ್ಮ ಸರ್ವಸ್ವವನ್ನೂ ಅದರಲ್ಲಿಯೇ ಕಾಣುತ್ತಾ ಇರುತ್ತಾರೆ. ಮೊದಲೇ ಆರ್ಥಿಕ ಕುಸಿತ ಮತ್ತು ಕೊರೋನಾ ಸಂಕಷ್ಟದಿಂದ ಉದ್ಯಮಗಳ ಉಳಿವಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಎಂಎಸ್ಎಂಇ ಉದ್ಯಮಗಳಿಗೆ ರಿಯಾಯಿತಿ ಕೊಡುವುದನ್ನು ಬಿಟ್ಟು ಭೂಮಿ ದರ ಹೆಚ್ಚಿಸಿ ಆರ್ಥಿಕ ಹೊರೆ ಹಾಕುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ‘ಸುಲಲಿತ ವ್ಯವಹಾರ’ (ಇಸ್ ಆಫ್ ಡುಯಿಂಗ್ ಬ್ಯುಜಿನೇಸ್), ‘ನವೋದ್ಯಮ'(ಸ್ಟಾರ್ಟ್ ಅಪ್) ಉತ್ತೇಜನೆ, ಸ್ಟ್ಯಾಂಡ್ ಅಫ್ ಹೆಸರಿನಲ್ಲಿ ಹಲವಾರು ಘೋಷಣೆ ಮಾಡುತ್ತಿವೆ. ಆದರೆ ಕೆಐಎಡಿಬಿಯ ಹೊಸ ಆದೇಶ ಪ್ರತಿಭಾವಂತ ಯುವ ಉದ್ಯಮದಾರರಿಗೆ ದೊಡ್ಡ ಅಡೆತಡೆ ಉಂಟು ಮಾಡುವ ಮೂಲಕ’ ಎಂಟ್ರಿ ಬ್ಯಾರಿಯರ್’ ನ್ನು ಹೆಚ್ಚಿಸಿದೆ. ಕೆಐಎಡಿಬಿ ಸಂಸ್ಥೆ ಕೈಗಾರಿಕಾ ಇಲಾಖೆಯ ಅಧೀನದಲ್ಲಿ ಬರುವ ಕಾರಣ, ಈ ಒಂದು ಉದ್ಯಮ ಸಂಕಷ್ಟಕ್ಕೆ ಬೃಹತ್ ಕೈಗಾರಿಕಾ ಸಚಿವ ಮಾನ್ಯ ಜಗದೀಶ್ ಶೆಟ್ಟರ್ ಅವರೇ ನೇರ ಹೊಣೆಗಾರರು. ಅವರಿಗೆ ನಿಜವಾಗಿಯೂ ಎಂ ಎಸ್ ಎಂ ಇ ಉದ್ಯಮದಾರರ ಮೇಲೆ ಕಳಕಳಿ ಇದ್ದರೆ, ಸಣ್ಣ ಮತ್ತು ಮಧ್ಯಮ ಉದ್ಯಮಿದಾರರಿಗೆ ಅನುಕೂಲಕರ ನೀತಿ ಅನುಷ್ಠಾನ ಮಾಡಬೇಕು. ಅಲ್ಲದೇ ಕೈಗಾರಿಕಾ ಭೂಮಿ ದರ ಹೆಚ್ಚಿಸುವ ಆದೇಶದ ಬಗ್ಗೆ ಸ್ಪಷ್ಟನೇ ನೀಡಿ ಕೂಡಲೇ ಈ ಉದ್ಯಮ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುವುದು.