ಅರವಿಂದ ಬೆಲ್ಲದ್ರೇ, ಮೊಸಳೆ ಕಣ್ಣೀರು ಹಾಕಬೇಡಿ: ಆಮ್ ಆದ್ಮಿ ಪಾರ್ಟಿ
ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದು ಸೋಜಿಗ ಮೂಡಿಸಿದೆ. ಈ ಯೋಜನೆಯ ಬಗ್ಗೆ ಮೊದಲು ಸಾರ್ವಜನಿಕರು ಮಾತನಾಡುತ್ತಿದ್ದರು. ಇದೀಗ ಬಿಜೆಪಿ ಶಾಸಕರೇ ಮಾತನಾಡುತ್ತಿರುವುದನ್ನೇ ನೋಡಿದರೇ, ಬಿಆರ್ ಟಿಎಸ್ ಕಳಪೆ ಕಾಮಗಾರಿ ಬಗ್ಗೆ ಅನುಮಾನ ಕಾಡದೇ ಇರದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಹೇಳಿದೆ.
ಶಾಸಕ ಅರವಿಂದ ಬೆಲ್ಲದ ಅವರು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಸತತ 2 ಬಾರಿ ಆಯ್ಕೆ ಆಗಿದ್ದಾರೆ. ಆದರೆ ಬಿಆರ್ ಟಿಎಸ್ ಕಾಮಗಾರಿ ಪ್ರಾರಂಭವಾದಾಗ ಇದರ ಬಗ್ಗೆ ಮಾತಾಡಬೇಕಿತು. ಅಲ್ಲದೇ ಕಳಪೆ ಕಾಮಗಾರಿ ಬಗ್ಗೆ ಸಾಮಾನ್ಯ ಜನರು ಕೂಡಾ ಗುಣಮಟ್ಟದ ಪರಿಶೀಲನೆ ಮಾಡುವ ಹಕ್ಕಿರುವಾಗ ಈ ಭಾಗದ ಶಾಸಕರಾಗಿ ನೂರಾರು ಕೋಟಿ ಕಾಮಗಾರಿ ಬಗ್ಗೆ ಕಾಳಜಿ ವಹಿಸದೇ ಇರುವುದು ಖಂಡನೀಯ. ಇದೀಗ ಕಳಪೆ ಕಾಮಗಾರಿ ಬಹಿರಂಗದ ನಂತರ. ಸುಮ್ಮನೆ ಶಾಸಕರು ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದಿದೆ.
ಇನ್ನು ಅರವಿಂದ ಬೆಲ್ಲದ ಅವರು ಒಬ್ಬ ಶಾಸಕರಾಗಿ ಅವರದ್ದೇ ಆದ ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶಗಳಿದ್ದರು ಸಹಿತ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದು ಮೊದಲ ಬಾರಿ ಎನ್ನಿಸುವುದು. ಬಿಆರ್ ಟಿಎಸ್ ಯೋಜನೆಯನ್ನು ಅವಳಿನಗರಕ್ಕೆ ನಾವು ತಂದಿದ್ದೇವೆ ಎಂದು ಹೇಳಿಕೊಳ್ಳುವ ಜಿಲ್ಲೆಯ ಉಸ್ತುವಾರಿ ಸಚಿವರು ಜನರು ಸಂಕಷ್ಟದಲ್ಲಿರುವಾಗ ಈ ಬಗ್ಗೆ ಮಾತನಾಡದೇ ಇರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಶಾಸಕ ಅರವಿಂದ ಬೆಲ್ಲದ ಅವರಿಗೆ ಜನರ ಮೇಲೆ ನಿಜವಾದ ಕಾಳಜಿ ಎಂಬುದು ಇದ್ದರೆ ಈಗಲಾದರೂ ತಮ್ಮ ಜವಾಬ್ದಾರಿ ಅರಿತು ವಿಧಾನಸಭೆಯಲ್ಲಿ ಈ ವಿಷಯವಾಗಿ ಧ್ವನಿ ಎತ್ತಿ ಪ್ರಾಮಾಣಿಕವಾಗಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಬೇಕು. ಕಳಪೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿಗಳು, ಇಂಜಿನಿಯರ್, ಪ್ರಭಾವಿಗಳಿದ್ದರೂ ಅವರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಶಾಸಕರು ಮುಂದಾಗಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.