Exclusive ಹುಬ್ಬಳ್ಳಿಯಲ್ಲಿ ನಿಲ್ಲದ ರೌಡಿಸಂ: ಮನೆಯವರ ಸ್ಥಿತಿ ಏನಾಗಿದೆ: ಹೋಂ ಮಿನಿಸ್ಟರಜೀ ಕ್ಯಾ ಬೋಲ್ತೇ..!
ಹುಬ್ಬಳ್ಳಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿನ್ನೆಯಷ್ಟೇ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆಯನ್ನ ಕೊಟ್ಟು ಹೋಗಿದ್ರು. ಏನೇ ಗಲಾಟೆಗಳಾದರೂ ನೀವೇ ಜವಾಬ್ದಾರಿ ಎಂದು ಎಚ್ಚರಿಸಿದ್ರು ಕೂಡಾ. ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ರೌಡಿಸಂ ಘಟನೆ. ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿದರೂ ಹುಬ್ಬಳ್ಳಿ ಪೊಲೀಸರು ಇನ್ನೂ ಪ್ರಕರಣ ದಾಖಲು ಮಾಡದೇ ಕುಟುಂಬ ಮತ್ತಷ್ಟು ಭಯದಿಂದ ನರಳುವಂತಾಗಿದೆ.
ಕಮರಿಪೇಟೆಯ ದಿವಟೆಗಲ್ಲಿಯಲ್ಲಿನ ಅರುಣ ಹಚಡದರ ಮನೆಯ ಪಕ್ಕ ಮನೆಯ ಕಟ್ಟಿಕೊಳ್ಳುತ್ತಿರುವ ಯಲ್ಲಪ್ಪ ಬದ್ದಿ ಎಂಬಾತನೇ ಬಾಡಿಗೆ ಗೂಂಡಾಗಳನ್ನ ಕರೆದುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಕಮರಿಪೇಟೆ ಠಾಣೆ ಪೊಲೀಸ್ ಇನ್ಸ ಪೆಕ್ಟರ್ ಬಳಿ ಹೋದರೂ ಯಾವುದೇ ಪ್ರಯೋಜನ ಆಗಿಲ್ಲ, ಬದಲಿಗೆ ಬಡಿಸಿಕೊಂಡವರಿಗೆ ಬೈಗುಳ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ದಿವಟೆಗಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಗಳಿಗೂ ಕರ್ನಾಟಕ ವಾಯ್ಸ್ ಗೆ ಲಭಿಸಿದ್ದು, ಗಂಡ-ಹೆಂಡತಿ ಮತ್ತು ಮಕ್ಕಳೊಂದಿಗೆ ಇದ್ದ ಹಚಡದರ ಮನೆಗೆ ಯಲ್ಲಪ್ಪ ಬದ್ದಿ ಬಂದು ದಾಂಧಲೆ ಆರಂಭಿಸಿದ್ದಾರೆ. ಆಗ ಗಾಬರಿಯಾದ ಅರುಣ, ಮನೆಯಲ್ಲಿ ತಿಳಿಸಾರನ್ನ ಅವರ ಮೇಲೆ ಎಸಿದಿದ್ದಾನೆ. ಅಗ ಬಾಡಿಗೆ ಗೂಂಡಾಗಳು ದೊಡ್ಡದಾದ ಬಡಿಗೆಯಿಂದ ಹಲ್ಲೆ ಮಾಡಿ, ಮನೆಯ ಕಿಟಿಕಿಗಳನ್ನ ಹೊಡೆದು ಹಾಕಿದ್ದಾರೆ.
ಈ ಘಟನೆ ನಡೆದು ಅದಾಗಲೇ ಮೂರು ದಿನ ಕಳೆದರೂ, ಪೊಲೀಸ್ ಇನ್ಸ್ ಪೆಕ್ಟರ್ ಬುದ್ನಿಯವರಿಗೆ ಸಿಸಿಟಿವಿ ದೃಶ್ಯ ಕಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿಯೇ, ನ್ಯಾಯ ಒದಗಿಸಿ ಕೊಡಿ ಎಂದು ಕಂಡ ಕಂಡವರ ಬಳಿ ಕೇಳಿಕೊಳ್ಳುವ ಸ್ಥಿತಿ ಅರುಣ ಕುಟುಂಬಕ್ಕೆ ಬಂದೊದಗಿದೆ.
ಗೃಹ ಸಚಿವರು ನಿನ್ನೆಯಷ್ಟೇ ಹೇಳಿ ಹೋಗಿದ್ದರೂ ಹುಬ್ಬಳ್ಳಿ ಪೊಲೀಸರು ಎಷ್ಟೊಂದು ಸಿರಿಯಸ್ಸಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆಂಬುದಕ್ಕೆ ಇದು ತಾಜಾ ಉದಾಹರಣೆ.