EXCLUSIVE- ಹುಬ್ಬಳ್ಳಿ ಪೊಲೀಸ್ ಕಮೀಷನರ್ ಖುರ್ಚಿಗೆ ಮನವಿ: ಕಚೇರಿಯಲ್ಲಿ ಹೈಡ್ರಾಮಾ..!

ಹುಬ್ಬಳ್ಳಿ: ಡ್ರಗ್ಸ್ ಮಾಫಿಯಾದಿಂದ ಕಾಲೇಜುಗಳ ರಕ್ಷಣೆ, ಡ್ರಗ್ಸ್ ತನಿಖೆಯಲ್ಲಿ ತೊಡಗಿಕೊಂಡ ಪೊಲೀಸರಿಗೆ ಇನ್ನೂ ಹೆಚ್ಚಿನ ಅಧಿಕಾರ ಮತ್ತು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿದ್ದವರು ಎಷ್ಟೇ ದೊಡ್ಡವರಾಗಿದ್ದರು ಅವರ ವಿರುದ್ಧ ಕಠಿಣ ಶಿಕ್ಷೆಗೆ ನೀಡಬೇಕೆಂದು ಮನವಿ ಕೊಡಲು ಹೋಗಿದ್ದ ಎಬಿವಿಪಿ ಕಾರ್ಯಕರ್ತರು, ಪೊಲೀಸ್ ಆಯುಕ್ತರ ಖುರ್ಚಿಗೆ ಮನವಿ ಸಲ್ಲಿಸಿದ ಅಪರೂಪದ ಘಟನೆ ಪೊಲೀಸ್ ಆಯುಕ್ತರ ಕಚೇರಿಯಲ್ಲೇ ನಡೆದಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋರಾಟ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು, ಆಯುಕ್ತರ ಕಚೇರಿ ಮೆಟ್ಟಿಲನ ಮೇಲೆ ಹೋರಾಟ ಆರಂಭಿಸಿದ್ರು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂತಹ ದೃಶ್ಯಗಳು ಕಂಡು ಬಂದಿದ್ದು ಇದೇ ಮೊದಲು.
ಇದೇ ಸಮಯದಲ್ಲಿ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರು. ಹಿರಿಯ ಅಧಿಕಾರಿಗಳು ಮನವಿ ಸ್ವೀಕರಿಸಲು ಹೊರಗೆ ಬಾರದ್ದರಿಂದ ಪೊಲೀಸ್ ಕಮಿಷನರ್ ಖುರ್ಚಿಗೆ ಮನವಿ ಕೊಟ್ಟು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಹೋರಾಟ ಮುಂದುವರಿಸಿದರು.
ಈ ಎಲ್ಲ ಹೈಡ್ರಾಮಾ ನಡೆದ ನಂತರ ಎಚ್ಚೆತ್ತುಕೊಂಡ ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗೆ ಮನವಿ ಸ್ವೀಕರಿಸುವಂತೆ ಒತ್ತಾಯಿಸಿದಾಗ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದರು. ಪೊಲೀಸ್ ಕಮಿಷನರ್ ಕಚೇರಿಯಲ್ಲಿನ ಕೆಲ ಅಧಿಕಾರಿಗಳು ಜನಸಾಮಾನ್ಯರೊಂದಿಗೆ ನಡೆಸಿಕೊಳ್ಳುವ ರೀತಿಯ ಬಗ್ಗೆ ಪ್ರಶ್ನೆ ಮೂಡತೊಡಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಬೇಸರವ್ಯಕ್ತಪಡಿಸಿದರು.
ಗಂಗಾಧರ ಅಂಜಗಿ, ಪ್ರತೀಕ ಮಾಳೆ, ವಿನಯ ಭರಮಗೌಡ, ಸುಹಾಸ, ರಾಘವೇಂದ್ರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.