ಉತ್ತಮ ಶಿಕ್ಷಕರ ಆಯ್ಕೆ: ನೂತನ ತಾಲೂಕುಗಳಿಗೆ ಪ್ರಾಶಸ್ತ್ಯವಿಲ್ಲ: ರದ್ದುಗೊಳಿಸಲು ಸಜ್ಜನ-ಉಪ್ಪಿನ ಆಗ್ರಹ
ಹುಬ್ಬಳ್ಳಿ: ಶಿಕ್ಷಕರ ದಿನಾಚರಣೆಯ ಆಚರಣೆಯಲ್ಲಿಯೂ ನೂತನ ತಾಲೂಕುಗಳಿಗೆ ಅನ್ಯಾಯವಾಗಿದ್ದು, ನೂತನ ತಾಲೂಕು ರಚನೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಶಿಕ್ಷಕರ ದಿನಾಚರಣೆ ಸಮಯದಲ್ಲಾದರೂ ಒಳ್ಳೆಯದಾಗಬಹುದೆಂದುಕೊಂಡಿದ್ದ ಶಿಕ್ಷಕರಿಗೆ ನಿರಾಸೆಯಾಗಿದೆ.
ಕರ್ನಾಟಕ ಸರ್ಕಾರ ಬಜೆಟ್ ಘೋಷಿಸಿದ್ದ ನೂತನ ತಾಲೂಕು ಘೋಷಣೆ ಕೇವಲ ಕಾಗದದ ಕುದುರೆಯಾಗಿದೆ, ಎಂದರೆ ತಪ್ಪಾಗಲಾರದು. ಕಳೆದ ಮೂರು ವರ್ಷಗಳ ಹಿಂದೆಯೇ ಘೋಷಣೆಯಾದ ತಾಲೂಕುಗಳಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ತಲೆಕೆಡಿಸಿಕೊಂಡಿಲ್ಲ.
ಈಗ ಶಿಕ್ಷಕರ ದಿನಾಚರಣೆ ಆಚರಣೆಯಲ್ಲಿಯೂ ನೂತನ ತಾಲೂಕುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದು ನೂತನ ತಾಲೂಕು ರಚನೆಗಾಗಿ ಸುಮಾರು ದಶಕಗಳ ಕಾಲ ಹೋರಾಟ ಮಾಡಿದ್ದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸರಕಾರ ಸುಮ್ಮನೆ ಕೂತಿರುವುದು ಸೋಜಿಗದ ಸಂಗತಿ.
ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಆಯ್ಕೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ನೂತನ ತಾಲೂಕುಗಳಿಗೆ ಯಾವುದೇ ಪ್ರಾಶಸ್ತ್ಯ ನೀಡಿಲ್ಲ. ಇದು ಅನ್ಯಾಯ. ಆಯುಕ್ತರು ಈ ಆದೇಶವನ್ನು ಈ ಕೂಡಲೇ ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಆಗ್ರಹಿಸಿದ್ದಾರೆ.