ರಾಜರೂರಲ್ಲಿ ಮರ್ಯಾದಾ ಹತ್ಯೆ..? ಪದವೀಧರೆಯ ಪಾಡು ನೋಡಿ..!

ಮೈಸೂರು: ಅನ್ಯ ಜಾತಿಯ ಯುವಕನೊಂದಿಗೆ ಮದುವೆಯಾಗಲು ಹೊರಟಿದ್ದ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಯುವತಿಯ ಮನೆಯವರೇ ಕಾರಣವಿರಬಹುದೆಂದು ಶಂಕಿಸಲಾದ ಘಟನೆ ಮೈಸೂರು ತಾಲೂಕು ದೊಡ್ಡ ಕಾನ್ಯ ಗ್ರಾಮದಲ್ಲಿ ಸಂಭವಿಸಿದೆ.
ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಹತ್ಯೆ ಮಾಡಿರೋ ಅನುಮಾನ ಮೂಡಿದ್ದು, ಮೀನಾಕ್ಷಿ (22) ಎಂಬಾಕೆಯೇ ಸಾವಿಗೀಡಾದ ಯುವತಿ.
ಮನೆಯವರು ಚಿತ್ರಹಿಂಸೆ ನೀಡುತ್ತಿರೋ ಬಗ್ಗೆ ಯುವತಿ ಬದುಕಿದ್ದಾಗ ಮೈಸೂರು ಎಸ್.ಪಿ ಹಾಗೂ ಒಡನಾಡಿ ಸಂಸ್ಥೆಗೆ ಕಳುಹಿಸಿರೋ ಇ-ಮೇಲ್ ಈಗ ವೈರಲ್ ಆಗಿದೆ. ಕಳೆದ ಬುಧವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿತ್ತು.
ವೈರಲ್ ಆಗಿರುವ ಇ-ಮೇಲ್ ನಲ್ಲಿ: ನನ್ನ ಅಣ್ಣ ತೀವ್ರ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ.
ಇದನ್ನು ನೋಡಿಯೂ ನಮ್ಮ ಮನೆಯವರು ತಡೆಯಲಿಲ್ಲ. ನಾನು ಗೃಹ ಬಂಧನಲ್ಲಿರುವೆ. ನನಗೆ ಜೀವ ಭಯವಿದೆ. ನನ್ನನ್ನು ಕಾಪಾಡಿ ಎಂದು ಬರೆದು ಕಳಿಸಿದ್ದಳು.
ಜೂನ್ 16 ಹಾಗೂ ಆಗಸ್ಟ್ 6ರಂದು ಎರಡು ಬಾರಿ ಎಸ್.ಪಿ.ಗೆ ದೂರನ್ನ ಮೀನಾಕ್ಷಿ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇ ಮೇಲ್ ನಲ್ಲಿ ದೂರು ನೀಡಿದ ನಂತರವೂ ಆಕೆಗೆ ರಕ್ಷಣೆ ಸಿಕ್ಕಿಲ್ಲ. ಅನ್ಯ ಜಾತಿ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಕ್ಕೆ ಹೆತ್ತವರೇ ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಅನುಮಾನಾಸ್ಪದ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.