ರಾಜ್ಯದ ಬಹುದೊಡ್ಡ ಡ್ರಗ್ಸ್ ಜಾಲ ಪತ್ತೆ: 44 ಲಕ್ಷದ “ಹ್ಯಾಶಿಶ್” ಜೊತೆ ಧಮ್… ರೇ.. ಧಮ್ ವಶ
ಬೆಂಗಳೂರು: ನಗರ ಕೇಂದ್ರ ಅಪರಾಧ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಡ್ರಗ್ಸ್ ಅಕ್ರಮದ ವಿರುದ್ಧ ಸಮರ ಸಾರಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರ ಸಮೇತ 44 ಲಕ್ಷದ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕಮಲ ಪಂಥ್, ಕೇರಳ ಮೂಲದ ಎ.ಸುಬ್ರಮಣಿ ಅಲಿಯಾಸ್ ಅಚ್ಯುತನ್ ನಾಯರ್, ವಿದುಸ್ ಅಲಿಯಾಸ್ ವಿಜಯಕುಮಾರ ಹಾಗೂ ಶೆಜಿನ್ ಅಲಿಯಾಸ್ ಜಾನ್ ಮ್ಯಾಥ್ಯೂ ಎಂಬುವವರನ್ನ ಬಂಧಿಸಲಾಗಿದ್ದು, ಅವರಿಂದ 44 ಲಕ್ಷ ರೂಪಾಯಿ ಮೌಲ್ಯದ 2133 ಗ್ರಾಂ ಹ್ಯಾಶಿಶ್ ಆಯಿಲ್, 2ಕೆಜಿ ಗಾಂಜಾ, ಆಯಿಲ್ ತುಂಬಲು ಇಟ್ಟುಕೊಂಡಿದ್ದ 105 ಖಾಲಿ ಡಬ್ಬಗಳು, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮೊಬೈಲ್ ಹಾಗೂ ತೂಕ ಮಾಡಲು ಬಳಕೆ ಮಾಡುತ್ತಿದ್ದ ಯಂತ್ರವನ್ನ ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಕರಣವನ್ನ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಆರೋಪಿಗಳು ಆಂದ್ರಪ್ರದೇಶದ ವೈಜಾಕ್ ಮೂಲದ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಇಟ್ಟುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಪ್ಯಾರಾಚೂಟ್ ಆಯಿಲ್ ಬಾಟಲಿನಲ್ಲಿ ಹ್ಯಾಶಿಶ್ ಆಯಿಲ್ ನ್ನ ಹಾಕಿಕೊಂಡು ಬಂದು ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ಗೊತ್ತಾಗಿದೆ.