ರಾಯಚೂರು: ಅಕ್ರಮ ಮರಳಿಗೆ ಬಾಲಕ ಬಲಿ: ಮಿತಿಮೀರಿದ ದಂಧೆ

ರಾಯಚೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಬಡಿದು ಬಾಲಕನೋರ್ವ ಸಾವಿಗೀಡಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಅಬಲೂರು ಬಳಿ ಸಂಭವಿಸಿದೆ.
ದ್ವಿಚಕ್ರ ವಾಹನದ ಮೂಲಕ ತಂದೆ ಗಂಗಪ್ಪನಿಗೆ ಕುಡಿಯುವ ನೀರು ತರಲು ಹೊರಟಾಗ, ಬಾಲಕ ಮೌನೇಶನಿಗೆ ಟ್ರ್ಯಾಕ್ಟರ್ ಬಡಿದು ಅಪಘಾತವಾಗಿದೆ. ತೀವ್ರ ರಕ್ತಸ್ರಾವದಿಂದ ಮೌನೇಶ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಘಟನೆಯ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಸಿಂಧನೂರು ಠಾಣೆ ಪೊಲೀಸರು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.