ಭೀಮಾತೀರದಲ್ಲಿ ಪ್ರತಿದಿನ 50 ಲಕ್ಷ ಡ್ರಗ್ಸ್ ವಹಿವಾಟು: ಪೊಲೀಸರ್ ರೊಕ್ಕಾ ಕೊಟ್ಟ ಬಂದಾರ್..

ವಿಜಯಪುರ: ಭೀಮಾತೀರದಲ್ಲಿ ಮರಳು, ಗನ್ ಮಾಫಿಯಾ ಹಾಗೂ ರಕ್ತಪಾಯಕ್ಕೆ ಹೆಸರುವಾಸಿಯಾಗಿದೆ. ಆದ್ರೇ, ಶಾಸಕರೊಬ್ಬರು ತಮ್ಮ ಮತಕ್ಷೇತ್ರದಲ್ಲಿ ದಿನನಿತ್ಯ ಲಕ್ಷಾಂತರ ಮೌಲ್ಯದ ಡ್ರಗ್ಸ್ ದಂಧೆ ಆಗುತ್ತದೆ ಎಂದು ಹೊಸ ಡ್ರಗ್ಸ್ ಬಾಂಬ್ ಹಾಕಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ ಮಾಫಿಯಾ ತಾಂಡವಾಡುತ್ತಿರುವ ಬೆನ್ನಲೇ ತನ್ನ ನಾಗಠಾಣ ಮತ ಕ್ಷೇತ್ರದಲ್ಲಿ ಪ್ರತಿ ದಿನ 50 ಲಕ್ಷದಷ್ಟು ಮಾದಕ ವ್ಯಸನಗಳ ವಹಿವಾಟು ಮಾಡಲಾಗುತ್ತದೆ ಎಂದು ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೊಸ ಬಾಂಬ್ ಸಿಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ನಿಷೇಧಿತವಾಗಿರುವ ಮಾವಾ, ಗಾಂಜಾನಂತಹ ಡ್ರಗ್ಸ ನ ಮಾರಾಟ ಚಡಚಣ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆದಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದರು.
ಅಲ್ಲದೇ, ಡ್ರಗ್ಸ್ ಮಾಫಿಯಾದಲ್ಲಿ ವಿಜಯಪುರ ಅಧಿಕಾರಿಗಳು ಕೂಡಾ ಶಾಮೀಲಾಗಿದ್ದಾರೆ. ಆಡಳಿತ ಪಕ್ಷದ ರಾಜಕಾಣಿಗಳಿಗೆ ಹಣ ಕೊಟ್ಟು ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಅವರಿಗೆ ಹೇಳಿದರೆ ಕೋಣದ ಮುಂದೆ ಕಿನ್ನೂರಿ ಬಾರಿಸಿದಂತೆ ಎಂದರು.