ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ 22 ವಯೋ ನಿವೃತ್ತ ಸಿಬ್ಬಂದಿಗೆ ಆದರದ ಬೀಳ್ಕೊಡುಗೆ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಲ್ಲಿ ವಯೋ ನಿವೃತ್ತಿ ಹೊಂದಿದ 22 ಜನ ಸಾರಿಗೆ ಸಿಬ್ಬಂದಿಗಳಿಗೆ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಕಲಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.
ನಿವೃತ್ತರನ್ನು ಸನ್ಮಾನಿಸಿದ ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಸಾರಿಗೆ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ನಿತ್ಯವೂ ವಿವಿಧ ಸ್ತರದ ನೂರಾರು ಜನರೊಂದಿಗೆ ಬೆರೆಯಬೇಕಾಗುತ್ತದೆ. ಹಗಲು- ರಾತ್ರಿ, ಹಬ್ಬ- ಹರಿದಿನ ಎನ್ನದೆ, ಕುಟುಂಬದಿಂದ ದೂರದಲ್ಲಿರಬೇಕಾಗುತ್ತದೆ. ಪ್ರತಿ ಕ್ಷಣವೂ ಬಸ್ಸಿನೊಂದಿಗೆ ಒಂದೂರಿನಿಂದ ಮತ್ತೊಂದು ಊರಿಗೆ ಹೋಗಬೇಕು. ಆಯಾ ಪ್ರದೇಶಗಳ ಹವಾಮಾನ ವೈಪರೀತ್ಯಗಳನ್ನು ಸಹಿಸುತ್ತ ವಿಭಿನ್ನ ಆಹಾರ ಪದ್ದತಿಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇಂತಹ ವೈರುದ್ಯಗಳ ನಡುವೆಯೂ 32 ರಿಂದ 40 ವರ್ಷಗಳ ಸುದೀರ್ಘ ಅವಧಿಗೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಿರಿಯ ನೌಕರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ತಮ್ಮ ಸೇವೆಯ ಸಮಯದಲ್ಲಿ ಏನೇ ಅವಘಡಗಳು ನಡೆದರೂ ಕುಟುಂಬ ಕೂಡಾ ಸಾಥ್ ನೀಡಿದ್ದು, ಪ್ರತಿಯೊಬ್ಬರು ಹೆಮ್ಮೆಪಡುವ ವಿಚಾರ. ಇವರನ್ನ ನಿವೃತ್ತಿಯಾದ ನಂತರವೂ ಹಾಯಾಗಿ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬದವರ ಮೇಲಿದೆ ಎಂದರು.
ನಿವೃತ್ತರಾದವರಲ್ಲಿ 5 ಚಾಲಕರು, 4 ನಿರ್ವಾಹಕರು, 6 ತಾಂತ್ರಿಕ ಸಿಬ್ಬಂದಿ ಮತ್ತು 7 ಸಾರಿಗೆ ನಿಯಂತ್ರಕರು ಇದ್ದಾರೆ. ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಕಾರ್ಮಿಕ ಕಲ್ಯಾಣ ಅಧಿಕಾರಿ ನಾಗಮಣಿ ಇತರ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಿವೃತ್ತರ ಕುಟುಂಬದವರು ಉಪಸ್ಥಿತರಿದ್ದರು.