ಧಾರವಾಡ-ಒಂದೇ ತಿಂಗಳಲ್ಲಿ 970 ಕೋಟಿ ಲಾಸ್: ಹೇಗಾಯಿತು.. ಡಿಸಿಯವರೇ ಹೇಳಿದ್ದಾರೆ…!

ಹುಬ್ಬಳ್ಳಿ: ಅಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 388 ಕೋಟಿ ರೂಪಾಯಿ ಬೆಳೆಹಾನಿ ಹಾಗೂ 582 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ನಗರದ ಡೆನ್ನಿಸನ್ ಹೋಟಲ್ ನಲ್ಲಿ ಜರುಗಿದ ಕೇಂದ್ರದ ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡದ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿದರು.
ಕಳೆದ ವರ್ಷವೂ ನೆರೆ ಬಂದು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಈ ಬಾರಿಯೂ ವಾಡಿಕೆಯಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣವಾಗಿ, 25 ಮನೆಗಳು ಭಾಗಶಃ, 1200 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಎನ್.ಡಿ.ಆರ್.ಎಫ್ ನಿಯಮಾನುಸಾರ ಮನೆಗಳಿಗೆ ಪರಿಹಾರ ಧನ ವಿತರಿಸಲಾಗುತ್ತಿದೆ. 55970 ಹೆಕ್ಟೇರ ಕೃಷಿ ಬೆಳೆ, 6635 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯಡಿ ಬರುವ 185.92 ಕಿ.ಮೀ.ರಸ್ತೆ, 41 ಸೇತುವೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ ಬರುವ 553.84 ಕಿ.ಮೀ. ರಸ್ತೆ, 59 ಸೇತುವೆ, 66 ಟ್ಯಾಂಕ್ ಗಳು ಹಾನಿಗೀಡಾಗಿವೆ. 168 ಶಾಲೆ, 150 ಅಂಗನವಾಡಿ ಕಟ್ಟಡಗಳು ಹಾನಿಯಾಗಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 147 ಕಿ.ಮೀ. ರಸ್ತೆ ಹಾನಿಯಾಗಿದೆ. ಜಿ.ಪಿ.ಎಸ್ ಆಧಾರಿಸಿ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯ ನೆಡೆಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಕಂದಾಯ ಇಲಾಖೆಗಳ ಜಂಟಿ ಸರ್ವೇ ಕೈಗೊಳ್ಳಲಾಗಿದೆ. ಅತಿವೃಷ್ಠಿಯಿಂದಾಗಿ 2 ಮಾನವ 3 ಜಾನುವಾರುಗಳ ಪ್ರಾಣಹಾನಿ ಉಂಟಾಗಿದೆ ಎಂದರು.
ಸಭೆಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶಕ ಡಾ.ಮನೋಹರನ್, ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ, ರಾಜ್ಯ ಕಂದಾಯ ಇಲಾಖೆಯ ಕೆಎಸ್ ಡಿ ಎಂ ಎ ವಿಭಾಗೀಯ ವ್ಯವಸ್ಥಾಪಕ ಡಾ.ಜೆ.ಎಸ್.ಶ್ರೀನಿವಾಸರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಡೆ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಕೃಷಿ, ಪಶು ವೈದ್ಯಕೀಯ, ಲೋಕೋಪಯೋಗಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.