ರಾಯಚೂರು: ಗುರುಗುಂಟಾ ಶ್ರೀ ವೇಂಕಟೇಶ್ವರ ದೇವಸ್ಥಾನ ಜಲಾವೃತ
ರಾಯಚೂರು: ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಮಳೆಯ ನೀರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನ ಜಲಾವೃತ ಮಾಡಿದೆ.
ನಿರಂತರವಾಗಿ ಸುರಿದ ಮಳೆಯ ನೀರು ದೇವಸ್ಥಾನ ಮತ್ತೂ ಪಕ್ಕದ ಮನೆಗಳಿಗೂ ನುಗ್ಗಿದ್ದು ಭಕ್ತರು ಒಳಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕವಾಗಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇ ನೀರು ನುಗ್ಗಲು ಕಾರಣವೆಂದು ಜನತೆ ಆರೋಪಿಸಿದ್ದಾರೆ.
ಪ್ರಸಿದ್ಧ ದೇವಸ್ಥಾನದ ಪಕ್ಕದಲ್ಲಿಯೇ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ನೀರು ದೇವಸ್ಥಾನದೊಳಗೆ ಬರದಂತೆ ರಸ್ತೆಯನ್ನ ನಿರ್ಮಾಣ ಮಾಡಬೇಕಿತ್ತು. ಆದರೆ, ಸೂಕ್ತವಾದ ಮೇಲ್ವಿಚಾರಣೆಯಿಲ್ಲದೇ ರಸ್ತೆಯನ್ನ ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಇದರಿಂದ ಈಗ ಭಕ್ತರು ಕಷ್ಟ ಅನುಭವಿಸಬೇಕಾಗಿದೆ.
ಗ್ರಾಮ ಪಂಚಾಯತಿಯವರಾದರೂ ತಕ್ಷಣ ಕ್ರಮ ಜರುಗಿಸಿ, ಇದನ್ನ ಸರಿಪಡಿಸುವ ಜವಾಬ್ದಾರಿಯನ್ನ ಹೊರಬೇಕಿದೆ.