Posts Slider

Karnataka Voice

Latest Kannada News

ಬಿಡನಾಳ ಶಾಲೆಯ ಮುಖ್ಯೋಪಾಧ್ಯಾಯರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಬಿಡನಾಳ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯ ಎಮ್. ಹೆಚ್. ಜಂಗಳಿ‌ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

01 ಜೂನ್ 1966 ರಂದು ಜನಿಸಿದ ಎಮ್. ಹೆಚ್. ಜಂಗಳಿ‌ 13 ಜೂನ್ 1989 ರಂದು ಶಿಕ್ಷಕ ವೃತ್ತಿಗೆ ನೇಮಗೊಂಡರು. ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ‌5 ವರ್ಷ ಸಹ ಶಿಕ್ಷಕರಾಗಿ ಸೇವೆಸಲ್ಲಿಸಿದ ಇವರು 13 ಜೂನ್ 1995 ರಲ್ಲಿ ಬಿಡನಾಳ ಶಾಲೆಗೆ ವರ್ಗವಾಗಿ ಬಂದರು. ಇದೇ 18 ವರ್ಷಗಳ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ 3‌ ವರ್ಷಗಳ ಕಾಲ ಬಿಡನಾಳ ಕ್ಲಸ್ಟರ್ ಮಟ್ಟದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು. 01‌ಆಗಸ್ಟ್ 2014 ರಿಂದ ಬಿಡನಾಳ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾದರಿ ಶಾಲೆ ನಿರ್ಮಾಣ

ಎಮ್. ಹೆಚ್. ಜಂಗಳಿ‌ ಬಿಡನಾಳ ಶಾಲೆ ಮುಖ್ಯೋಪಾಧ್ಯಾಯರಾದ ನಂತರ‌ ಶಾಲೆಯ ಸುಧಾರಣೆ ಹಲವು ಕ್ರಮಗಳನ್ನು ಕೈಗೊಂಡರು. ಖಾಸಗಿ‌ ಶಾಲೆಗಳಿಗೆ ಪೈಪೋಟಿಯಾಗಿ ಬಿಡನಾಳ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದರು. ಶಿಕ್ಷಕ ವೃತ್ತಿಯಲ್ಲಿ ತಾವು ಗಳಿಸಿದ 31‌ ವರ್ಷಗಳ ಸುದೀರ್ಘ ಅನುಭವನ್ನು ಶಾಲೆಯ ಉನ್ನತಿಗೆ ಧಾರೆಯರಿಯುತ್ತಿದ್ದಾರೆ. ಹಲವಾರು ಸರ್ಕಾರಿ‌ ಶಾಲೆಗಳು ಮುಚ್ಚುವ ಹಂತದ ಭೀತಿಯಲ್ಲಿವೆ. ಇದಕ್ಕೆ ವಿರುದ್ಧವಾಗಿ ಎಮ್ . ಹೆಚ್ . ಜಂಗಳಿ‌ ಕ್ಷೇತ್ರ ಸಂಪನ್ಮೂಲಗಳ ವ್ಯಕ್ತಿಯಾಗಿದ್ದಾಗ 2‌ ಹೊಸ ಶಾಲೆಗಳನ್ನು ತೆರೆಯುವಲ್ಲಿ ಕಾರಣೀಕರ್ತರಾದರು. ಬಿಡನಾಳ ಶಾಲೆಯ ಬಗ್ಗೆ ಅವಿನಾಭಾವ ಸಂಬಂಧ ಹೊಂದಿರುವ ಇವರು 1.5 ಲಕ್ಷ ಸ್ವಂತ ದುಡ್ಡಿನಲ್ಲಿ ಶಾಲಾ ಸೌಂದರ್ಯೀಕರಣ ಮಾಡಿಸಿದರು. 2015 ರಿಂದ 6‌ ಮತ್ತು‌ 7‌ನೇ ತರಗತಿಯ ಇಚ್ಛಿತ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಬೋದನೆ ನೀಡಲು ಆರಂಭಿಸಿದರು. ಇದರಿಂದ ಸುತ್ತಲಿನ ಮುತ್ತಲಿನ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರುತ್ತಿದ್ದ ಮಕ್ಕಳೆಲ್ಲ ಸರ್ಕಾರಿ ಶಾಲೆಯ ಕಡೆ ಮುಖ ಮಾಡುವಂತಾಯಿತು. ಶಾಲಾ ದಾಖಲಾತಿ‌ ಹೆಚ್ಚಾಯಿತು‌.

ಬಿಡನಾಳ ಶಾಲೆಯ ಅಭಿವೃದ್ಧಿ ಪರ್ವ

ಎಮ್. ಹೆಚ್. ಜಂಗಳಿ‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಜನಪ್ರತಿನಿಧಿಗಳು ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಧನ ಸಹಾಯ ನೀಡಿದರು. ಇದರಿಂದಾಗಿ ಬಿಡನಾಳ ಶಾಲೆಯಲ್ಲಿ ‌ಅಭಿವೃದ್ಧಿ ಪರ್ವವನ್ನು ಆರಂಭವಾಯಿತು. 15‌ ಲಕ್ಷ ಶಾಸಕರ ಅನುದಾನದಲ್ಲಿ ಕಾಂಪೌಂಡ್ , ಶಾಲೆಯ ಮಹಾದ್ವಾರ , ಮಕ್ಕಳ ಸುರಕ್ಷಿತೆಗಾಗಿ ಗ್ರಿಲ್ , ಫ್ಲೋರಿಂಗ್ ಕೆಲಸಗಳನ್ನು ನಿರ್ಮಾಣವಾದವು. ಪಾಲಿಕೆ ಸದಸ್ಯರ 2 ಲಕ್ಷ ಅನುದಾನದಲ್ಲಿ ಸಿ.ಸಿ. ಕ್ಯಾಮರಾ ಶಾಲೆಯಲ್ಲಿ ಅಳವಡಿಸಲಾಗಿದೆ. ಅಶ್ವಿನಿ ಮಜ್ಜಿಗೆ ಮಹಾಪೌರರಾಗಿದ್ದ ಸಂದರ್ಭದಲ್ಲಿ 5 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ಘಟಕ ವ್ಯವಸ್ಥೆ ಕಲ್ಪಿಸಿದರು. ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್ ಶಾಸಕರ ಅನುದಾನದಲ್ಲಿ ಶಾಲೆಗೆ 3 ಸ್ಮಾರ್ಟ್ ಬೋರ್ಡ್ ಗಳನ್ನು ನೀಡಿದ್ದಾರೆ. 2016-17 ನೇ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಗಳನ್ನು ಶಾಲೆಯಲ್ಲಿ ಪ್ರಾರಂಭಿಸಲಾಗಿದೆ. ಒಂದನೇ ತರಗತಿಯಿಂದಲೇ‌ ಇಂಗ್ಲೀಷ್ ಮಾಧ್ಯಮವನ್ನು ಶಾಲೆಯಲ್ಲಿ ಪರಿಚಯಿಸಲಾಗಿದೆ. ಪೋಷಕರು ಬಿಡನಾಳ ಶಾಲೆಗೆ ಮಕ್ಕಳನ್ನು ದಾಖಲಿಸಲು ಹೆಚ್ಚಿನ ಒಲವು ತೋರುತ್ತಿದ್ದಾರೆ.

ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳು

ಬಿಡನಾಳ ಶಾಲೆ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ‌ ಮುಂದಿದೆ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ , ಶಾಲೆಗಾಗಿ ನಾವು ನೀವು , ಕ್ರೀಡಾ ಕೂಟ, ವಿಶೇಷ ದಾಖಲಾತಿ ಆಂದೋಲನ , ಅಕ್ಷರ ಜಾತ್ರೆ ಕಾರ್ಯಕ್ರಮ ಶಾಲೆಯಲ್ಲಿ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಬ್ಬಗಳು, ಶಾಲಾ ವಾರ್ಷಿಕೋತ್ಸವ ಮತ್ತು ಕ್ರೀಡಾ ಕೂಟಗಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ಗಣೇಶ ಗಣೇಶ ಚತುರ್ಥಿ ಮತ್ತು ಮೊಹರಂ ಸಹ ಶಾಲೆಯಲ್ಲಿ ಆಚರಣೆ ಮಾಡಲಾಗುತ್ತದೆ. ಉಚಿತವಾಗಿ ಬಡ ಮಕ್ಕಳಿಗೆ ಆರೋಗ್ಯ ತಪಾಸಣೆ, ಬ್ಯಾಗ್ ಹಾಗೂ‌ಲೇಖನ ಸಾಮಗ್ರಿಗಳನ್ನು ಸಂಘ ಸಂಸ್ಥೆಗಳು ಮೂಲಕ ಆಯೋಜನೆ ಮಾಡಲಾಗುತ್ತದೆ.

ಬಿಡನಾಳ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ಮುಖ್ಯೋಪಾಧ್ಯಾಯ ಎಮ್. ಹೆಚ್. ಜಂಗಳಿ‌ ಅವರಿಗೆ ರಾಜ್ಯಮಟ್ಟದ‌ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿರುವುದು ಶಾಲೆ ಇತರೆ ಶಿಕ್ಷರು, ಮಕ್ಕಳು ಹಾಗೂ ಗ್ರಾಮಸ್ಥರಲ್ಲಿ ಅತೀವ ಸಂತಸ ತಂದಿದೆ.


Spread the love

Leave a Reply

Your email address will not be published. Required fields are marked *