ಕೊರೋನಾ ಪೇಸೆಂಟೂ ಐದು ಸಾವಿರ ರೂಪಾಯಿ: ಮೊರಬದಲ್ಲಿ ಗೊಂದಲ- ಅಂಬ್ಯುಲೆನ್ಸ್ ಚಾವಿ ನಾಪತ್ತೆ
ಧಾರವಾಡ: ಜಿಲ್ಲೆಯಲ್ಲಿಯೂ ಕೊರೋನಾ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದಿಲ್ಲಾ ಒಂದು ರಗಳೆಗಳು ನಡೆಯುತ್ತಲೆಯಿದ್ದು, ಶವವನ್ನ ಗ್ರಾಮಕ್ಕೆ ತೆಗೆದುಕೊಂಡು ಹೋದ ಮೇಲೆ ಐದು ಸಾವಿರ ರೂಪಾಯಿಗಾಗಿ ಗೊಂದಲವುಂಟಾದ ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಮೊರಬ ಗ್ರಾಮದ ವೃದ್ಧೆಯೋರ್ವರನ್ನ ಕಳೆದ ಕೆಲವು ದಿನಗಳ ಹಿಂದೆ ಕಿಮ್ಸ್ ಗೆ ಚಿಕಿತ್ಸೆಗಾಗಿ ದಾಖಲು ಮಾಡಿತ್ತು. ಇಂದು ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್ ನಲ್ಲಿ ಮೊರಬ ಗ್ರಾಮಕ್ಕೆ ತರಲಾಯಿತು. ತಂದ ತಕ್ಷಣವೇ ಇವರಿಗೆ ಕೊರೋನಾ ಆಗಿದೆಯಂದು, ಐದು ಸಾವಿರ ರೂಪಾಯಿ ಕೊಡಬೇಕೆಂದು ಅಂಬ್ಯುಲೆನ್ಸ್ ನವರು ಕೇಳಿದ ತಕ್ಷಣವೇ ಗದ್ದಲ ಆರಂಭವಾಗಿದೆ.
ಗ್ರಾಮದಲ್ಲಿ ನೂರಾರು ಜನರು ಕೂಡಿದ್ದರಿಂದ ಸಾಕಷ್ಟು ಗೊಂದಲವುಂಟಾಗಿತ್ತು. ಶವವನ್ನ ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಯಿತಾದರೂ, ಗ್ರಾಮದಲ್ಲಿದ್ದ ಯಾರೋ ಅಂಬ್ಯುಲೆನ್ಸ್ ಕೀ ಯನ್ನ ತೆಗೆದುಕೊಂಡು ಹೋಗಿದ್ದು, ಅಂಬ್ಯುಲೆನ್ಸ್ ಈಗ ಗ್ರಾಮದಲ್ಲೇ ಉಳಿದುಹೋಗಿದೆ.
ಅಂಬ್ಯುಲೆನ್ಸ್ ನಲ್ಲಿರುವ ಸಿಬ್ಬಂದಿಗಳು ಕೂಡಾ ವಾಹನದ ಕೀ ಗಾಗಿ ಹುಡುಕಾಟ ನಡೆಸಿದ್ದು, ಕೀ ಯನ್ನ ಯಾರೂ ತೆಗೆದುಕೊಂಡು ಹೋಗಿದ್ದಾರೆಂಬುದು ಗೊತ್ತಾಗುತ್ತಿಲ್ಲ. ಆದರೆ, ಅಂಬ್ಯುಲೆನ್ಸ್ ನವರು ಐದು ಸಾವಿರ ರೂಪಾಯಿಯನ್ನ ಕೇಳಿದ್ದು ಯಾಕೆ ಎಂಬುದು ಕೂಡಾ ಗೊಂದಲ ಸೃಷ್ಟಿಯಾಗಿದೆ. ಏನೇ ಆಗಲಿ, ಕೊರೋನಾ ಪ್ರಕರಣಗಳಲ್ಲಿ ಹಲವು ತೊಂದರೆಗಳು ಕಾಣುತ್ತಿರುವುದಂತೂ ಸತ್ಯವಾಗಿದೆ.