ಕೃಷಿ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ- ‘ಚಿನ್ನಾಭರಣ’ ದಂಗಾದ ಎಸಿಬಿ
ಕಲಬುರಗಿ: ರೈತರ ಬಿಲ್ ಪಾಸ್ ಮಾಡಲು ಲಂಚದ ಬೇಡಿಕೆಯಿಟ್ಟಿದ್ದ ಕೃಷಿ ಅಧಿಕಾರಿಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಮನೆಯಲ್ಲೂ ಕಂತೆ ಕಂತೆ ಹಣ ಸಿಕ್ಕಿ, ಅಧಿಕಾರಿಯ ಬಂಡವಾಳ ಬಯಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಕೃಷಿ ಇಲಾಖೆ ಅಧಿಕಾರಿ ಸುನೀಲಕುಮಾರ, ಕಲಬುರಗಿ ನಗರದ ಕನ್ನಡ ಭವನದ ಬಳಿ ರೈತರಿಂದ ಐವತ್ತು ಸಾವಿರ ರೂಪಾಯಿ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಜೇವರ್ಗಿ ನಿವಾಸಿ ಶರಣಗೌಡ ಎಂಬ ರೈತರಿಗೆ ಕೃಷಿ ಸಲಕರಣೆಗಳ ಬಿಲ್ ಪಾಸ್ ಮಾಡಲು ಒಂದು ಲಕ್ಷ ರೂಪಾಯಿಯ ಬೇಡಿಕೆಯಿಟ್ಟಿದ್ದ ಅಧಿಕಾರಿ ಐವತ್ತು ಸಾವಿರವನ್ನ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲಕುಮಾರ ಕಲಬುರಗಿ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿ 9 ಲಕ್ಷ ರೂ ನಗದು, ಚಿನ್ನಾಭರಣ ಪತ್ತೆಯಾಗಿದೆ.
ನಿನ್ನೆ ರೈತನಿಂದ ಹಣ ಪಡೆಯುತ್ತಿದ್ದ ಸಮಯದಲ್ಲಿಯೂ ರೈತನಿಗೆ ಆದಷ್ಟು ಬೇಗನೇ ಇನ್ನುಳಿದ ಹಣವನ್ನ ಕೊಡುವಂತೆ ಅಧಿಕಾರಿ ಒತ್ತಾಯಿಸುತ್ತಿದ್ದ ಎಂದು ಗೊತ್ತಾಗಿದೆ. ಅಧಿಕಾರಿಯ ಮನೆಯಲ್ಲಿ ಸಿಕ್ಕ ಹಣದ ಬಗ್ಗೆಯೂ ಮಾಹಿತಿಯನ್ನ ಎಸಿಬಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.