ರಾಜ್ಯಕ್ಕೆ ನೂತನ ಕಾಂಗ್ರೆಸ್ ಉಸ್ತುವಾರಿ- ಕೆಪಿಸಿಸಿಯಲ್ಲಿ ಮಹತ್ವದ ಸಭೆ
ಬೆಂಗಳೂರು: ರಾಜ್ಯ ಉಸ್ತುವಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ರಾಜ್ಯ ಉಸ್ತುವಾರಿಯಾಗಿದ್ದ ವೇಣುಗೋಪಾಲರನ್ನ ಬದಲಿಸಿರುವ ಎಐಸಿಸಿ, ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲರನ್ನ ರಾಜ್ಯ ಉಸ್ತುವಾರಿಯನ್ನಾಗಿ ನೇಮಕ ಮಾಡಿತ್ತು.
ಅಧಿವೇಶನ ನಡೆಯುವ ವೇಳೆಯಲ್ಲೇ ಆಗಮಿಸಿರುವ ನೂತನ ಉಸ್ತುವಾರಿಯವರಿಗೆ ಕೆಪಿಸಿಸಿ ಕಚೇರಿಯಲ್ಲಿ ಹಾರ್ಧಿಕವಾಗಿ ಸ್ವಾಗತ ಕೋರಲಾಯಿತು. ಈ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನ ಕಾಂಗ್ರೆಸ್ ಸಮರ್ಥವಾಗಿ ಎದುರಿಸಬೇಕಿದೆ. ಜನಪರವಾಗಿ ನಿಂತು ಎಲ್ಲರಿಗೂ ಅನುಕೂಲವಾಗುವ ಹಾಗೇ ಪಕ್ಷ ನಡೆದುಕೊಳ್ಳುವ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ.