ಶಿಕ್ಷಕರಿಗೆ ದಸರಾ ರಜೆಯಾದರೂ ಕೊಡಿ ಸ್ವಾಮಿ..! ಅವರು ಮನುಷ್ಯರೇ..!
ಧಾರವಾಡ: ಕಳೆದ ಜೂನ್ ತಿಂಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ದಸರಾ ಸಮಯದಲ್ಲಿಯಾದರೂ ವಿಶ್ರಾಂತಿ ನೀಡುವುದಕ್ಕೆ ರಾಜ್ಯ ಸರಕಾರ ಮುಂದಾಗುತ್ತಾ ಎಂದು ಶಿಕ್ಷಕ ಸಮೂಹ ಬಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುವಂತಾಗಿದೆ.
ಕಳೆದ ಮಾರ್ಚ್ ತಿಂಗಳಿನಿಂದ ಶಿಕ್ಷಕರು, ಇಲಾಖೆಯ ಹಾಗೂ ಇಲಾಖೇತರ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದಾರೆ. ಜೊತೆಯಲ್ಲಿ ರಜಾಸಹಿತ ಇಲಾಖೆ ಆಗಿರುವುದರಿಂದ ಶಿಕ್ಷಕರಿಗೆ ಈ ಹಂತದಲ್ಲಿ ಕನಿಷ್ಠ ಪಕ್ಷ ದಸರಾ ರಜೆಯನ್ನು ನೀಡಿ ವಿಶ್ರಾಂತಿ ಕೊಡುವುದು ಈ ಹಂತದಲ್ಲಿ ತುಂಬಾ ಅವಶ್ಯಕತೆವಿರತ್ತೆ.
ಮುಂದೆ ಬರಬಹುದಾದ ಕೊರೋನ ಸವಾಲುಗಳನ್ನು ಎದುರಿಸಿ ತರಗತಿಗಳನ್ನು ನಡೆಸಬೇಕಾಗಬಹುದು. ಆದ್ದರಿಂದ ಶಿಕ್ಷಕರಿಗೆ ಸ್ವಲ್ಪಮಟ್ಟಿಗೆ ವಿಶ್ರಾಂತಿ ಅಗತ್ಯ ವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮಧ್ಯಂತರ ರಜೆ ನೀಡಲಾಗುತ್ತಿತ್ತು. ಉದ್ದೇಶ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾನಸಿಕ ವಿಶ್ರಾಂತಿ ಮತ್ತು ಪಾರಂಪರಿಕ ದಸರಾ ಆಚರಣೆ.
ಈಗಿರುವ ಆದೇಶದ ಪ್ರಕಾರ ಅಕ್ಟೋಬರ್ 3 ರಿಂದ ಮಧ್ಯಂತರ ರಜೆ ಪ್ರಾರಂಭವಾಗಿ 26 ಅಕ್ಟೋಬರ್ ರವರೆಗೆ ರಜೆ ನೀಡಬೇಕು. ಆದರೆ ಇಲ್ಲಿಯವರೆಗೂ ಯಾವುದೇ ಮುನ್ಸೂಚನೆ ಇಲ್ಲ. ಮೇ 29 ರಿಂದ ಜೂನ್ 7 ರ ವರೆಗೆ ಶಿಕ್ಷಕರಿಗೆ ಕೋವಿಡ್ ಕಾರಣದಿಂದ ರಜೆ ಮುಂದುವರಿಸಲಾಗಿತ್ತು. 8 ಜೂನ್ ದಿಂದ ನಿರಂತರವಾಗಿ ಶಿಕ್ಷಕರು ಇಲಾಖೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ.
ಏನೇ ಚರ್ಚೆಗಳಿದ್ದರೂ, ಈ 10 ದಿನಗಳನ್ನು ಕಡಿತ ಮಾಡಿದರೂ 14 ದಿನಗಳ ರಜೆ ನಮಗೆ ದೊರಕಬೇಕು. ‘ವಿದ್ಯಾಗಮ’ ಚಟುವಟಿಕೆ ಚೆನ್ನಾಗಿ ನಡೆಯುತ್ತಿದೆ. ಆದರೆ, ಶಿಕ್ಷಕರಿಗೆ ಸ್ವಲ್ಪ ದಿನವಾದರೂ ಈ ಚಟುವಟಿಕೆಗಳಿಂದ ಬಿಡುಗಡೆ ಬೇಕಾಗಿದೆ. ಕೆಲವು ದಿನಗಳಾದರೂ ಕೋವಿಡ್ ಆತಂಕ ಗಳಿಂದ ದೂರ ಉಳಿಯಬೇಕಾಗಿದೆ. ಹಾಗಾಗಿ ಶಿಕ್ಷಕ ವೃಂದಕ್ಕೆ ಮಧ್ಯಂತರ ರಜೆ ಅವಶ್ಯಕವಾಗಿದೆ ಎಂಬುದನ್ನ ಶಿಕ್ಷಣ ಇಲಾಖೆ ಮನವರಿಕೆ ಮಾಡಿಕೊಳ್ಳಬೇಕಿದೆ.